ಶಿವಮೊಗ್ಗ: ಆಗುಂಬೆ ಘಾಟ್ ನ 11ನೇ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾಗಿದೆ. ಜುಲೈ 12ರ ಬೆಳಗ್ಗೆ 8 ಗಂಟೆಯಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ರಸ್ತೆ ಮೇಲೆ ಬಿದ್ದಿರುವ ಮಣ್ಣು, ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿದೆ. ಜುಲೈ 30 ರವರೆಗೆ ಆಗುಂಬೆ ಘಾಟ್ ನಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಇರುತ್ತದೆ.
ಬೇರೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ತೀರ್ಥಹಳ್ಳಿ -ಕೊಪ್ಪ -ಶೃಂಗೇರಿ -ಕಾರ್ಕಳ -ಮಂಗಳೂರು ಮಾರ್ಗವಾಗಿ ವಾಹನಗಳು ಸಂಚರಿಸಬಹುದು. ತೀರ್ಥಹಳ್ಳಿ -ಆಗುಂಬೆ -ಶೃಂಗೇರಿ -ಕಾರ್ಕಳ -ಮಂಗಳೂರು ಮಾರ್ಗವಾಗಿಯೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ತೀರ್ಥಹಳ್ಳಿ -ಮಾಸ್ತಿಕಟ್ಟೆ -ಕುಂದಾಪುರ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ. ಈ ಮೂಲಕ ಆಗುಂಬೆ ಘಾಟ್ ಬದಲಿಗೆ ವಾಹನ ಸಂಚಾರಕ್ಕೆ ಶಿವಮೊಗ್ಗ ಜಿಲ್ಲಾಡಳಿತ ಬದಲಿ ಮಾರ್ಗಗಳನ್ನು ಸೂಚಿಸಿದೆ.