ಚಿತ್ರದುರ್ಗ: ಬೆಂಬಲ ಬೆಲೆಯಡಿ ಸಿರಿಧಾನ್ಯಗಳನ್ನು ಖರೀದಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆದು ಶಿಫಾರಸ್ಸು ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಮಲ್ಲಿಹಳ್ಳಿ ಗ್ರಾಮದ ಕೃಷಿಕ ಪ್ರಭುಲಿಂಗಪ್ಪ ಹಾಗೂ ಮಹೇಶ್ ಅವರ ಸಿರಿಧಾನ್ಯ ರೈತರ ಒಕ್ಕಲು ಕಣ ಹಾಗೂ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ರೈತರೊಂದಿಗೆ ಸಂವಾದ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ರಾಜ್ಯದಲ್ಲಿ ಅತಿಹೆಚ್ಚು ಸಿರಿಧಾನ್ಯ ಬೆಳೆ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಸಾಂಪ್ರದಾಯಿಕವಾಗಿಯೇ ಸಿರಿಧಾನ್ಯ ಬೆಳೆಯುವುದು ರೂಢಿಯಲ್ಲಿದೆ. ಕಡಿಮೆ ಮಳೆಯ ನಡುವೆ ಬರಿ ಇಬ್ಬನಿ ಆಧರಿಸಿ ವಾರ್ಷಿಕವಾಗಿ ಎರಡು ಬೆಳೆಗಳನ್ನು ರೈತರು ತೆಗೆಯುತ್ತಾರೆ. ಈ ಮೊದಲು ಸಿರಿಧಾನ್ಯಗಳಿಗೆ ಮಾರುಕಟ್ಟೆ ಇರಲಿಲ್ಲ. ಈಗ ಮಾರುಕಟ್ಟೆ ದೊರಕುತ್ತಿದೆ. ರಾಗಿ, ಭತ್ತ, ತೊಗರಿ ಮಾದರಿಯಲ್ಲಿ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಹೊಸದುರ್ಗ ಶಾಸಕ ಗೊವಿಂದಪ್ಪನವರು ಸ್ವತಃ ಕೃಷಿಕರಾಗಿದ್ದು, ಸಿರಿಧಾನ್ಯ ಬೆಳೆಯುವುದರೊಂದಿಗೆ ಆಹಾರದಲ್ಲಿಯೂ ಸಿರಿಧಾನ್ಯ ಬಳಸುತ್ತಿದ್ದಾರೆ. ಈ ಮೂಲಕ ತಾಲ್ಲೂಕಿನ ರೈತರಿಗೆ ಮಾದರಿಯಾಗಿದ್ದಾರೆ. ಹೊಸದುರ್ಗ ಮಾದರಿಯಲ್ಲಿ ಮಳೆ ಕಡಿಮೆ ಬೀಳುವ ರಾಜ್ಯದ ಇತರೆ ಜಾಗದಲ್ಲಿ ಸಿರಿಧಾನ್ಯ ಬೆಳೆಯಲು ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು. ಅಂತರಾಷ್ಟ್ರೀಯ ಮೇಳದಲ್ಲಿ ಮುಖ್ಯಮಂತ್ರಿಗಳಿಂದ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಸನ್ಮಾನಿಸಲಾಗುವುದು ಎಂದರು.
ಪಡಿತರ ವಿತರಣೆಯಲ್ಲಿ ಸ್ಥಳೀಯವಾಗಿ ಬೆಳೆಯುವ ಸಿರಿಧಾನ್ಯಗಳನ್ನು ಸರ್ಕಾರ ಖರೀದಿಸಿ, ಜನರಿಗೆ ವಿತರಿಸಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು, ರೈತರು ಉಪಸ್ಥಿತರಿದ್ದರು.