ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ಹೊಸ ಕೃಷಿ ಯೋಜನೆಗಳನ್ನು ಜೂನ್ 20ರೊಳಗೆ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಕೃಷಿ ಇಲಾಖೆ ಹೊಸ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸಿದ್ದಾರೆ.
ಪ್ರಸಕ್ತ ಬಜೆಟ್ ನಲ್ಲಿ ಘೋಷಣೆಯಾದ 19 ಯೋಜನೆಗಳಲ್ಲಿ 12 ಯೋಜನೆಗಳಿಗೆ ಸರ್ಕಾರಿ ಆದೇಶ ಹೊರಡಿಸಿದ್ದು, ಬಾಕಿ ಘೋಷಣೆಗಳಿಗೆ ವಾರದೊಳಗೆ ಆದೇಶ ಹೊರಡಿಸಿ ಕಾರ್ಯಕ್ರಮ ಜಾರಿಗೊಳಿಸುವಂತೆ ತಿಳಿಸಿದ್ದಾರೆ.
ಕೃಷಿ ಕ್ಷೇತ್ರವನ್ನು ಸುಸ್ಥಿರ ಮತ್ತು ಲಾಭದಾಯಕವಾಗಿ ಮಾಡಲು ರೈತ ಸಮೃದ್ಧಿ ಯೋಜನೆ ರೂಪಿಸಿದ್ದು, ಸಮರ್ಪಕವಾಗಿ ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.
ಕರ್ನಾಟಕ ರೈತ ಸಮೃದ್ಧಿ ಯೋಜನೆ, ಕೃಷಿ ಅಭಿವೃದ್ಧಿ ಪ್ರಾಧಿಕಾರ, ಕೃಷಿ ಭಾಗ್ಯ ಯೋಜನೆ, ಸಮುದಾಯದ ಬೀಜ ಬ್ಯಾಂಕ್ ಸ್ಥಾಪನೆ, ನಮ್ಮ ಮಿಲೆಟ್ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.