ಚೆನ್ನೈ: ರೈತರೊಬ್ಬರ ಕೃಷಿ ಭೂಮಿಯಲ್ಲಿ ಇದ್ದಕ್ಕಿದ್ದಂತೆ ಬೃಹತ್ ಹೊಂಡವೊಂದು ನಿರ್ಮಾಣವಾಗಿದ್ದು, ಈ ಹೊಂಡದಿಂದ ಬಿಸಿ ಶಾಖ ಹೊರಬರುತ್ತಿರವ ಆತಂಕಕಾರಿ ಘಟನೆ ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದಿದೆ.
ತಿರುಪತ್ತೂರಿನ ಆಚಮಂಗಲಂ ಗ್ರಾಮದ ವ್ಯಕ್ತಿಯೊಬ್ಬರ ಕೃಷಿ ಭೂಮಿಯಲ್ಲಿ ಈ ಘಟನೆ ನಡೆದಿದೆ. ಕೃಷಿ ಭೂಮಿಯಲ್ಲಿ ಏಕಾಏಕಿ ಸೃಷ್ಟಿಯಾಗಿರುವ ಐದು ಅಡಿ ಆಳದ ಗುಂಡಿಯಿಂದ ಬಿಸಿ ಹೊರಬರುತ್ತಿದ್ದು, ಕಂಗಾಲಾಗಿರುವ ಕೃಷಿಕ ಪೊಲೀಸರು ಹಾಗೂ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹೊಂಡದ ಆಳದ ಕೆಲ ಮಾದರಿಗಳನ್ನು ಸಂಗ್ರಹಿಸಿ ವೆಲ್ಲೂರು ಹಾಗೂ ಚೆನ್ನೈ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ರಂಧ್ರ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲಿದ್ದ ಮಾದರಿ ಸಂಗ್ರಹಿಸಿದ್ದು, ಇದು ನೆಲಕ್ಕೆ ಅಪ್ಪಳಿಸಿರುವ ಉಲ್ಕಾಶಿಲೆ. ಇದು ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕ್ಷುದ್ರಗ್ರಹ ಸಾಲಿನಿಂದ ಇಲ್ಲಿಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ರವಿ ತಿಳಿಸಿದ್ದಾರೆ. ಹೆಚ್ಚಿನ ಪರಿಶೀಲನೆಗಾಗಿ ಮಾದರಿಗಳನ್ನು ಅಹಮದಾಬಾದ್ ಗೂ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.