ಉತ್ತರ ಪ್ರದೇಶದ ಆಗ್ರಾದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಪತಿ ನನಗೆ ಸೀರೆ ತರಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆದರೆ ಇದು ತಾವು ಬಗೆಹರಿಸುವ ಪ್ರಕರಣವಲ್ಲವೆಂದು ತೀರ್ಮಾನಿಸಿದ ಪೊಲೀಸರು ಕೌಟುಂಬಿಕ ಸಮಸ್ಯೆಗಳ ಸಲಹೆಗಾರರ ಬಳಿ ಕಳಿಸಿದ್ದು, ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ.
ಈ ದಂಪತಿ 2022ರಲ್ಲಿ ವಿವಾಹವಾಗಿದ್ದು, ಇಬ್ಬರಲ್ಲೂ ಹೊಂದಾಣಿಕೆ ಬಾರದ ಕಾರಣ ಸಣ್ಣಪುಟ್ಟ ವಿಷಯಕ್ಕೆಲ್ಲ ಸದಾಕಾಲ ಕಿತ್ತಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸೀರೆ ಕೊಡಿಸುವ ವಿಚಾರದಲ್ಲಿ ಇದು ವಿಕೋಪಕ್ಕೆ ತಿರುಗಿದ್ದು, ರೊಚ್ಚಿಗೆದ್ದ ಪತ್ನಿ, ತನ್ನ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ವಿಚಾರಣೆಗೆಂದು ಆತನನ್ನ ಕರೆಸಿದ ಪೊಲೀಸರಿಗೆ ವಾಸ್ತವ ವಿಷಯ ಅರಿವಾಗಿದೆ.
ಹೀಗಾಗಿ ಕೌಟುಂಬಿಕ ಸಮಸ್ಯೆಗಳ ಸಲಹೆಗಾರರ ಬಳಿ ಕಳುಹಿಸಿದಾಗ ಇಬ್ಬರನ್ನು ಕೌನ್ಸೆಲಿಂಗ್ ಮಾಡಿದ ಡಾ. ಸತೀಶ್ ಸಿಖರ್ವಾರ್ ಇಬ್ಬರ ಆಹವಾಲುಗಳನ್ನು ಆಲಿಸಿದ್ದಾರೆ. ತನ್ನ ಪತಿ ನಿರ್ಲಕ್ಷಿಸುತ್ತಾನೆ ಅಲ್ಲದೆ ಆಗಾಗ ಹೊಡೆಯುತ್ತಾನೆ ಎಂದು ಪತ್ನಿ ಹೇಳಿದರೆ, ಪತ್ನಿ ಸದಾಕಾಲ ಮೊಬೈಲ್ ನಲ್ಲಿಯೇ ಮುಳುಗಿರುತ್ತಾಳೆ ಎಂದು ಪತಿ ಆರೋಪಿಸಿದ್ದಾನೆ. ಡಾ. ಸತೀಶ್ ಇಬ್ಬರನ್ನು ಕೂರಿಸಿಕೊಂಡು ಬುದ್ಧಿ ಮಾತುಗಳನ್ನು ಹೇಳಿದ್ದಾರೆ. ಬಳಿಕ ಪತಿ ತನ್ನ ಪತ್ನಿ ಮೆಚ್ಚಿದ ಸೀರೆಯನ್ನು ಕೊಡಿಸಿದ್ದು, ಇಬ್ಬರು ನಗುನಗುತ್ತಾ ಒಂದಾಗಿ ಅಲ್ಲಿಂದ ತಮ್ಮ ಮನೆಗೆ ತೆರಳಿದ್ದಾರೆ.