ಆಗ್ರಾ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ವಿಶೇಷ ರೋಗಿಯೊಬ್ಬರು ಚಿಕಿತ್ಸೆ ಪಡೆದಿದ್ದಾರೆ. ಅದು ಬೇರೆ ಯಾರು ಅಲ್ಲ ಭಗವಾನ್ ಶ್ರೀ ಕೃಷ್ಣ..! ಅಂದ್ರೆ ಮುರಿದಿದ್ದ ಶ್ರೀಕೃಷ್ಣನ ತೋಳಿಗೆ ಆಸ್ಪತ್ರೆ ಸಿಬ್ಬಂದಿ ಬ್ಯಾಂಡೇಜ್ ಮಾಡಿರುವಂಥ ಅಪರೂಪದ ಘಟನೆ ನಡೆದಿದೆ.
ಶುಕ್ರವಾರ ಬೆಳ್ಳಂಬೆಳಗ್ಗೆ ಆಗ್ರಾದ ಜಿಲ್ಲಾಸ್ಪತ್ರೆಗೆ ಅಳುತ್ತಾ, ಓಡೋಡಿ ಬಂದ ವ್ಯಕ್ತಿಯೊಬ್ಬರು ಶ್ರೀಕೃಷ್ಣನ ವಿಗ್ರಹದ ತೋಳಿಗೆ ಬ್ಯಾಂಡೇಜ್ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನು ಕೇಳಿದ ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ. ಬೆಳಗ್ಗೆ ಸ್ನಾನ ಮಾಡುವಾಗ ಕೃಷ್ಣನ ವಿಗ್ರಹದ ತೋಳು ಆಕಸ್ಮಿಕವಾಗಿ ಮುರಿದಿದ್ದು, ದಯವಿಟ್ಟು ಸರಿಪಡಿಸಿ ಅಂತಾ ಅರ್ಚಕ ಲೇಖ್ ಸಿಂಗ್ ಗೋಗರೆದಿದ್ದಾರೆ.
ಮೊದಲಿಗೆ ವಿಚಲಿತರಾದ ಆಸ್ಪತ್ರೆ ಸಿಬ್ಬಂದಿ, ನಂತರ ಅರ್ಚಕರ ಮನವಿಗೆ ಸ್ಪಂದಿಸಿದೆ. ಕೃಷ್ಣನ ಹೆಸರಿನಲ್ಲಿ ನೋಂದಣಿ ಮಾಡಿ, ನಂತರ ವಿಗ್ರಹದ ತೋಳಿಗೆ ಬ್ಯಾಂಡೇಜ್ ಮಾಡಲಾಯಿತು. ಕೃಷ್ಣನ ವಿಗ್ರಹವು ಬಾಲ್ಯದ ರೂಪದಲ್ಲಿದ್ದು, ಮುರಿದ ತೋಳಿನೊಂದಿಗೆ ಅರ್ಚಕ ಲೇಖ್ ಸಿಂಗ್ ಅಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಲೇಖ್ ಸಿಂಗ್ ಅವರು ಕಳೆದ 30 ವರ್ಷಗಳಿಂದ ಅರ್ಜುನ್ ನಗರದ ಖೇರಿಯಾ ಮೋಡ್‌ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ.
ಅರ್ಚಕರೊಬ್ಬರು ಕೈ ಮುರಿದುಕೊಂಡಿರುವ ವಿಗ್ರಹದೊಂದಿಗೆ ಬಂದಿದ್ದು, ಚಿಕಿತ್ಸೆಗಾಗಿ ಅಳುತ್ತಿರುವ ವಿಷಯ ತಿಳಿಯಿತು. ಪುರೋಹಿತರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ಬ್ಯಾಂಡೇಜ್ ಮಾಡಲಾಯಿತು ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ಅಗರವಾಲ್ ಹೇಳಿದ್ದಾರೆ.