ಆಗ್ರಾ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿ ಅಣಕು ಕಾರ್ಯಾಚರಣೆ ನಡೆಸಿ 22 ರೋಗಿಗಳು ಮೃತಪಟ್ಟಿದ್ದರೆಂದು ಹೇಳಿದ್ದ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ಪಾರಸ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಆಸ್ಪತ್ರೆಯನ್ನೇ ಸೀಜ್ ಮಾಡಲಾಗಿದೆ.
ಆಕ್ಸಿಜನ್ ಪೂರೈಕೆ ಕಡಿತದ ಅಣುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಪ್ರಭು ನಾರಾಯಣ ಸಿಂಗ್ ಇದೀಗ ಪಾರಸ್ ಆಸ್ಪತ್ರೆಗೆ ಬೀಗ ಜಡಿದಿದ್ದು, ಅಲ್ಲಿದ್ದ 50 ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಆಸ್ಪತ್ರೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದ್ದು, ಸೆಕ್ಷನ್ 52, 54, 188, 505ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 26, 27ರಂದು ಪಾರಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಥಗಿತಗೊಳಿಸಿ ಅಣುಕು ಕಾರ್ಯಾಚರಣೆ ಮಾಡಲಾಗಿತ್ತು. ಕೇವಲ 5 ನಿಮಿಷದಲ್ಲಿ 22 ರೋಗಿಗಳು ಮೃತಪಟ್ಟಿದ್ದರಂದು ಆಸ್ಪತ್ರೆ ಮಾಲೀಕ ಡಾ.ಅರಿಂಜಯ್ ಜೈನ್ ಹೇಳಿದ್ದರು. ಈ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿತ್ತಲ್ಲದೇ ತನಿಖೆಗೆ ಆದೇಶಿಸಲಾಗಿತ್ತು. ತನಿಖೆ ಬಳಿಕ ಇದೀಗ ಎರಡು ದಿನಗಳಲ್ಲಿ ಆಸ್ಪತ್ರೆಯಲ್ಲಿ 7 ರೋಗಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.