ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಪಿನ್ಹಾಟ್ ಪ್ರದೇಶದಲ್ಲಿ 25 ವರ್ಷದ ಮಹಿಳೆ ಮೇಲೆ ಇಬ್ಬರು ಮುಖಂಡರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮನಸುಖ್ ಪುರ ಪ್ರದೇಶದಲ್ಲಿ ಮಹಿಳೆ ಪೋಷಕರನ್ನು ಭೇಟಿ ಮಾಡಿ ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ಘಟನೆ ನಡೆದಿದೆ. ಸಂತ್ರಸ್ತೆಯ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಹಿಳೆ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಊರಿಗೆ ಹೋಗಿ ಬರುವಾಗ ಪತಿ ಕೆಲಸದ ನಿಮಿತ್ತ ಮಾರುಕಟ್ಟೆಗೆ ಹೋಗಿದ್ದಾನೆ. ಮಹಿಳೆ ಮಕ್ಕಳೊಂದಿಗೆ ಮನೆಗೆ ಹೊರಟಿದ್ದಾಳೆ. ಈ ವೇಳೆ ಗ್ರಾಮದ ಮುಖಂಡರಾದ ಅಭಿಷೇಕ್ ತ್ಯಾಗಿ ಮತ್ತು ಆತನ ಸ್ನೇಹಿತ ವಿನೋದ್ ಲಿಫ್ಟ್ ಕೊಡುವುದಾಗಿ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ನಂತರ ಮಹಿಳೆ ಘಟನೆಯ ಬಗ್ಗೆ ಪತಿಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಸಂತ್ರಸ್ಥೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.