ಬರ್ತಡೇ ಪಾರ್ಟಿ ನಡೆಯುತ್ತಿದ್ದ ನವೀಕರಣ ಹಂತದಲ್ಲಿದ್ದ ಮನೆಯು ಕುಸಿದಿದ್ದು ಕನಿಷ್ಟ 2 ಮಂದಿ ಸಾವನ್ನಪ್ಪಿದ್ದು ಮಾತ್ರವಲ್ಲದೇ 15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆಯು ಆಗ್ರಾ ತಾಜ್ಮಹಲ್ ಸಮೀಪದ ದುಂಡುಪುರ ಎಂಬಲ್ಲಿ ನಡೆದಿದೆ. ಬರ್ತಡೇ ಬಾಯ್ ಅನಿಕೇತ್ ಸುರಕ್ಷಿತವಾಗಿದ್ದಾನೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಜಿಲ್ಲಾಡಳಿತ ಕೂಡ ಪ್ರತಿಕ್ರಿಯಿಸಿದ್ದು ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದರೆ ಡಜನ್ಗೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿಎನ್ ಸಿಂಗ್ ಕೂಡ ಈ ವಿಚಾರವಾಗಿ ಮಾತನಾಡಿ, ಅವಘಡ ಸಂಭವಿಸುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಹಾಗೂ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ನವೀಕರಣ ಹಂತದಲ್ಲಿರುವ ಕಟ್ಟಡದ ಎರಡನೆ ಮಹಡಿಯಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಲಾಗಿತ್ತು. 40ಕ್ಕೂ ಅತಿಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮನೆ ನೆಲಸಮವಾಗುವ ವೇಳೆ ಅತಿಥಿಗಳು ನೃತ್ಯ ಮಾಡೋದ್ರಲ್ಲಿ ನಿರತರಾಗಿದ್ದರು. ಅದೃಷ್ಟವಶಾತ್ ಅನೇಕರು ಅವಘಡ ಸಂಭವಿಸುವ ಕೆಲವೇ ನಿಮಿಷಗಳ ಮುನ್ನ ಮನೆಯಿಂದ ತೆರಳಿದ್ದರು ಎಂದು ತಿಳಿದುಬಂದಿದೆ.
ಅತಿಯಾದ ಕರ್ಕಶವಾದ ಹಾಡುಗಳು ಹಾಗೂ ವಿಪರೀತ ನೃತ್ಯ ಕುಣಿತ ಈ ಅವಘಡಕ್ಕೆ ಕಾರಣ ಎಂದು ನೆರೆಹೊರೆಯವರು ಅಭಿಪ್ರಾಯಪಟ್ಟಿದ್ದಾರೆ.