ಆಗ್ರಾ: ಭಾನುವಾರ ಉತ್ತರ ಪ್ರದೇಶದ ಆಗ್ರಾದಲ್ಲಿ ಪಾಟ್ನಾ -ಕೋಟಾ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾ -ಕೋಟಾ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಕರೊಬ್ಬರು ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಬಂದಿದ್ದು, ತಂಡವನ್ನು ಕಳುಹಿಸಲಾಗಿದೆ. ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 5 ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಪ್ರಕಾರ, ನಿರ್ಜಲೀಕರಣ ಸಾವಿಗೆ ಕಾರಣ ಎಂದು ರೈಲ್ವೆ ಆಗ್ರಾದ ಸಹಾಯಕ ವಾಣಿಜ್ಯ ವಿಭಾಗ ವ್ಯವಸ್ಥಾಪಕ ವೀರೇಂದ್ರ ಸಿಂಗ್ ಹೇಳಿದ್ದಾರೆ.
ಅವರು ಛತ್ತೀಸ್‌ಗಢದ ರಾಯ್ ಪುರದಿಂದ 90 ಪ್ರಯಾಣಿಕರ ಗುಂಪಿನ ಭಾಗವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಆರು ಜನರಲ್ಲಿ ಐವರು ಆಗ್ರಾದ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆರನೆಯವರನ್ನು ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
“ಪ್ರಯಾಣಿಕರು ಅಸ್ವಸ್ಥರಾಗಿರುವ ಬಗ್ಗೆ ರೈಲ್ವೆ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿತ್ತು. ಅವರು ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸುಮಾರು 62 ವರ್ಷ ವಯಸ್ಸಿನ ಮಹಿಳೆ ಮತ್ತು ಸುಮಾರು 65 ವರ್ಷ ವಯಸ್ಸಿನ ಪುರುಷ ಮೃತಪಟ್ಟಿದ್ದಾರೆ ಎಂದು ಆಗ್ರಾ ಕ್ಯಾಂಟ್ ರೈಲ್ವೇ ವೈದ್ಯರು ಘೋಷಿಸಿದ್ದಾರೆ.
ಒಂದೇ ಗುಂಪಿನ ಐವರು ಪ್ರಯಾಣಿಕರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಆಗ್ರಾ ವಿಭಾಗದ ಉತ್ತರ ಮಧ್ಯ ರೈಲ್ವೆ ಅಧಿಕಾರಿ ಶ್ರೀವಾಸ್ತವ ತಿಳಿಸಿದ್ದಾರೆ.
ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ಆಹಾರ ವಿಷ ಅಥವಾ ನಿರ್ಜಲೀಕರಣದ ಪ್ರಕರಣವೇ ಎಂಬ ಪ್ರಶ್ನೆಗೆ, ಮರಣೋತ್ತರ ಪರೀಕ್ಷೆಯ ನಂತರ ಅದು ಗೊತ್ತಾಗುತ್ತದೆ ಎಂದರು.
ಝೆಹರ್ ಖುರಾನಿ ಎಂದು ಕರೆಯಲ್ಪಡುವ ಕ್ರಿಮಿನಲ್ ಗ್ಯಾಂಗ್ ಪ್ರಯಾಣಿಕರಿಗೆ ವಿಷ ಬೆರೆಸಿದ ಸಿಹಿತಿಂಡಿಗಳನ್ನು ನೀಡಿರಬಹುದೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿ, ಅಂತಹ ಯಾವುದೇ ದೂರು ಇಲ್ಲ ಎಂದು ಅವರು ಹೇಳಿದ್ದಾರೆ.