ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ವಿವಾದಿತ ಅಗ್ನಿಪಥ್ ಯೋಜನೆಯನ್ನು ಪುನರ್ ಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಅಗ್ನಿಪಥ್ ಯೋಜನೆಯು ಭವಿಷ್ಯದ ಜವಾನರ ಭರವಸೆಗೆ ‘ವಂಚನೆ’ ಮಾಡುವಂತಹದ್ದಾಗಿದೆ. ಕೇವಲ ನಾಲ್ಕು ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ಪಿಂಚಣಿ ಇಲ್ಲದೇ ನಿವೃತ್ತಿಯಾಗುವುದರಿಂದ ಜವಾನರಿಗೆ ಯಾರೂ ಹೆಣ್ಣು ಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಾಲ್ಕು ವರ್ಷಗಳ ಅವಧಿಯಲ್ಲಿ ಆರು ತಿಂಗಳು ತರಬೇತಿಗೆ ಮೀಸಲಾಗಿರುತ್ತದೆ, ಇದರ ಜೊತೆಗೆ ಆರು ತಿಂಗಳು ರಜೆ ಇರುತ್ತದೆ. ಮೂರು ವರ್ಷಗಳು ಮಾತ್ರ ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಗುತ್ತದೆ. ಈ ಸೇವೆಯ ನಂತರ ಮನೆಗೆ ಬರುವ ಜವಾನರು ಮದುವೆಯಾಗಲು ಹುಡುಗಿಯನ್ನು ಹುಡುಕುವುದು ಕಷ್ಟವಾಗುತ್ತದೆ. ಈ ಮೂಲಕ ಅಗ್ನಿಪಥ್ ಎನ್ನುವುದು ಭವಿಷ್ಯದ ಜವಾನರ ಅಥವಾ ಸೈನಿಕರ ವಿರುದ್ಧವಾಗಿರುವ ಯೋಜನೆಯಾಗಿದೆ ಮತ್ತು ಅವರ ವಿಶ್ವಾಸಗಳಿಗೆ ವಂಚನೆ ಮಾಡುವ ಯೋಜನೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಸಮಸ್ಯೆ ಪರಿಹರಿಸಲು ವಿಭಿನ್ನ ಪ್ರಯತ್ನ; ವೆಬ್ ಸೈಟ್ ಮೂಲಕ ಶಿಕ್ಷಣ ಸಚಿವರಿಗೆ ದೂರು ನೀಡಲು ಸಿಗಲಿದೆ ಅವಕಾಶ
ಈ ಹಿಂದೆ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಾಗ ರೈತರು ಪ್ರತಿಭಟನೆ ನಡೆಸಿದ್ದರಿಂದ ಅವುಗಳನ್ನು ವಾಪಸ್ ಪಡೆಯಲಾಯಿತು. ಇದೀಗ ಯುವಕರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿದೆ ಎಂದು ಪರೋಕ್ಷವಾಗಿ ಅಗ್ನಿಪಥ್ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕಾಗಿದೆ ಎಂದು ಕರೆ ನೀಡಿದರು.
ಇಂತಹ ಪ್ರತಿಕ್ರಿಯೆ ನೀಡುತ್ತಿರುವುದಕ್ಕಾಗಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವಂತೆ ಯಾರಾದರೂ ಕೇಳಿದರೆ ಅದಕ್ಕೆ ನಾನು ಸಿದ್ಧನಿದ್ದೇನೆ. ಸೂಚನೆ ನೀಡಿದ ಮರುಕ್ಷಣವೇ ಹುದ್ದೆಯನ್ನು ತ್ಯಜಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.