ವಯಸ್ಸೆಂಬುದು ಲೆಕ್ಕಾಚಾರಕ್ಕೆ ಮಾತ್ರ. ಸಾಧಿಸುವ ಛಲವೊಂದಿದ್ದರೆ ಸಾಕು ಎಂತಹ ಬೆಟ್ಟವನ್ನಾದರೂ ಏರಬಹುದು? ಎಂಬ ನಾಣ್ಣುಡಿ ಅನಾದಿ ಕಾಲದಿಂದಲೂ ಕೇಳಿಬರುತ್ತಿದೆ. ಇಂತಹ ಛಲದೊಂದಿಗೆ 105 ವರ್ಷದ ರಾಮ್ ಬಾಯಿ ಎಂಬ ವೃದ್ಧಿ ಮಹಾನ್ ಸಾಧನೆ ಮಾಡಿದ್ದಾರೆ.
ಇವರು ಮಾಡಿರುವ ಸಾಧನೆ ಏನೆಂಬುದನ್ನು ಓದಿದರೆ/ ನೋಡಿದರೆ ಎಂತಹ ಯುವಕರೂ ನಾಚುತ್ತಾರೆ. ಈ ಅಜ್ಜಿ 100 ಮೀಟರ್ ದೂರವನ್ನು ಕೇವಲ 45.40 ಸೆಕೆಂಡುಗಳಲ್ಲಿ ಓಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಅಂದಹಾಗೆ, ಈ ದಾಖಲೆಯನ್ನು ಮಾಡಿರುವುದು ಗುಜರಾತಿನ ವಡೋದರದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ. ಈ ಅಜ್ಜಿ ಕೇವಲ 100 ಮೀಟರ್ ಸ್ಪರ್ಧೆಯಲ್ಲಷ್ಟೇ ಅಲ್ಲ, 200 ಮೀಟರ್ ಸ್ಪರ್ಧೆಯಲ್ಲೂ ಮೊದಲಿಗಳಾಗಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಜೂನ್ 15 ರಂದು ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಅಜ್ಜಿಗೆ ಸಾಧನೆಯ ದಾಹ ತಣಿದಿರಲಿಲ್ಲ. ಜೂನ್ 19 ರಂದು ನಡೆದ 200 ಮೀಟರ್ ಸ್ಪರ್ಧೆಯಲ್ಲೂ ಪಾಲ್ಗೊಂಡು ಆ ದೂರವನ್ನು 1 ನಿಮಿಷ ಮತ್ತು 52.17 ಸೆಕೆಂಡುಗಳಲ್ಲಿ ಓಡಿ ಚಿನ್ನದ ಪದಕವನ್ನು ತಮ್ಮ ಕೊರಳಿಗೆ ಹಾಕಿಕೊಂಡರು.
ಮುಂಬೈ ಲೋಕಲ್ ರೈಲುಗಳಲ್ಲಿ ‘ಯೋಗ ದಿನಾಚರಣೆ’
100 ಮೀಟರ್ ಸ್ಪರ್ಧೆಯಲ್ಲಿ 45.40 ಸೆಕೆಂಡುಗಳಲ್ಲಿ ಓಡುವ ಮೂಲಕ ರಾಮ್ ಬಾಯಿ ಈ ಹಿಂದೆ ವಿಶ್ವ ಹಿರಿಯರ ಕ್ರೀಡಾಕೂಟದಲ್ಲಿ 101 ವರ್ಷದ ಮಾನ್ ಕೌರ್ ಎಂಬುವರು 74 ಸೆಕೆಂಡುಗಳಲ್ಲಿ ಓಡಿದ್ದ ದಾಖಲೆಯನ್ನು ಧೂಳೀಪಟ ಮಾಡಿದರು. ಈ ಮೂಲಕ ರಾಮ್ ಬಾಯಿ ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
1917 ರ ಜನವರಿಯಲ್ಲಿ ಜನಿಸಿದ ರಾಮ್ ಬಾಯಿ ಅವರು ಹರ್ಯಾಣದ ಚಾಖ್ರಿ ದಾದ್ರಿ ಜಿಲ್ಲೆಯ ನಿವಾಸಿಯಾಗಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರ ಸ್ಪರ್ಧೆಯಲ್ಲಿ ಯಾರೂ ಸ್ಪರ್ಧಿಗಳು ಇಲ್ಲದ ಕಾರಣ ರಾಮ್ ಬಾಯಿ ಅವರೊಬ್ಬರೇ 100 ಮೀಟರ್ ಓಡಿ ಈ ದಾಖಲೆ ಮಾಡಿದ್ದಾರೆ. 104 ವರ್ಷವಾಗಿದ್ದಾಗ ಈ ಅಜ್ಜಿ ಓಡುವುದನ್ನು ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ಇವರ ದೈನಂದಿನ ಆಹಾರವೆಂದರೆ, 1 ಲೀಟರ್ ಹಾಲು, ಚುರ್ಮಾ, ಬಾಜ್ರಾ ರೋಟಿ, 250 ಗ್ರಾಂ ತುಪ್ಪ ಮತ್ತು 500 ಗ್ರಾಂ ಮೊಸರು ತಿನ್ನುತ್ತಾರಂತೆ!