ಬೆಂಗಳೂರು: ಶಾಲಾ ಪ್ರವೇಶ ಮತ್ತು ಎಲ್.ಕೆ.ಜಿ.ಗೆ ಸೇರುವ ಮಕ್ಕಳಿಗೆ ವಯೋಮಿತಿ ನಿಗದಿಪಡಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮಗಳ ಅನ್ವಯ ಪೂರ್ವ ಪ್ರಾಥಮಿಕ ತರಗತಿಗಳ ಪ್ರವೇಶಕ್ಕೆ ಶಿಕ್ಷಣ ಇಲಾಖೆ ವಯೋಮಿತಿ ನಿಗದಿ ಮಾಡಿದ್ದು, ಎಲ್‌ಕೆಜಿ ತರಗತಿಗೆ ಪ್ರವೇಶ ಪಡೆಯಲು ಜೂನ್ ಒಂದಕ್ಕೆ ಮಗುವಿಗೆ ನಾಲ್ಕು ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ವರ್ಷದ ಜೂನ್ ಒಂದಕ್ಕೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಲಾಗಿದೆ. ಈ ನಿಯಮವನ್ನು ರಾಜ್ಯದಲ್ಲಿ 2025 -26 ನೇ ಸಾಲಿನಿಂದ ಅನ್ವಯವಾಗುವಂತೆ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ.
2023 -24 ನೇ ಸಾಲಿಗೆ ಪ್ರವೇಶ ಪಡೆಯಲು ಜೂನ್ 1ಕ್ಕೆ ಅನ್ವಯವಾಗುವಂತೆ ಎಲ್.ಕೆ.ಜಿ.ಗೆ 4 ವರ್ಷ ವಯೋಮಿತಿ ನಿಗದಿಪಡಿಸಿ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.
ಸರ್ಕಾರ 1 ನೇ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿಗದಿಪಡಿಸಿರುವುದಕ್ಕೆ ಪೋಷಕರ ವಲಯದಿಂದ ವಿರೋಧ ವ್ಯಕ್ತವಾಗಿದೆ. ಶಾಲಾ ಪ್ರವೇಶಾತಿಯನ್ನು ಆರು ವರ್ಷಕ್ಕೆ ನಿಗದಿಪಡಿಸಿರುವುದರಿಂದ ಜೂನ್ ಮತ್ತು ಜುಲೈನಲ್ಲಿ ಜನಿಸಿದ ಮಕ್ಕಳು ಒಂದನೇ ತರಗತಿ ಸೇರಲು ಮತ್ತೊಂದು ವರ್ಷ ಕಾಯಬೇಕಾಗುತ್ತದೆ. ಈ ನಿಯಮ ಅವೈಜ್ಞಾನಿಕವಾಗಿದೆ ಎಂದು ಹೇಳಲಾಗಿದೆ.