ತಿರುಪತಿ: ತಿರುಪತಿ-ತಿರುಮಲ ದೇವರ ಸನ್ನಿಧಾನಕ್ಕೆ ಬೆಟ್ಟಹತ್ತಿ ಹೋಗುವ ಭಕ್ತರು ಮತ್ತೆ ಆತಂಕಕ್ಕೀಡಾಗುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದಷ್ಟೇ ತಿರುಮಲ ಬೆಟ್ಟ ಹತ್ತುತ್ತಿದ್ದ ಕುಟುಂಬದ ಮೇಲೆ ಚಿರತೆ ದಾಳಿ ನಡೆಸಿ 6 ವರ್ಷದ ಮಗುವನ್ನು ತಿಂದು ಹಾಕಿದ್ದ ಘಟನೆ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಬೆಟ್ಟದ ಮೆಟ್ಟಿಲುಗಳ ಮೇಲೆ ಮತ್ತೆ ಚಿರತೆ ಹಾಗೂ ಕರಡಿ ಪ್ರತ್ಯಕ್ಷವಾಗಿವೆ.
ಬಾಲಕಿ ಮೇಲೆ ದಾಳಿ ನಡೆಸಿ ಸಾಯಿಸಿದ್ದ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಆದರೆ ಈಗ ತಿರುಮಲ ಬೆಟ್ಟದಲ್ಲಿ ಪಾದಚಾರಿ ಮಾರ್ಗದಲ್ಲಿ ಮತ್ತೊಂದು ಚಿರತೆ ಹಾಗೂ ಕರಡಿ ಕೂಡ ಪ್ರತ್ಯಕ್ಷವಾಗಿವೆ.
ಬೆಟ್ಟ ಹತ್ತುತ್ತಿದ್ದ ಕೆಲ ಭಕ್ತರ ಗುಂಪು ಬುಧವಾರ ಬೆಳಿಗ್ಗೆ ತೆರಳುತ್ತಿದ್ದಾಗ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನಾಮಲಗಣಿ ಎಂಬಲ್ಲಿ ಮರದ ಮೇಲೆ ಚಿರತೆ ಕಾಣಿಸಿಕೊಂಡಿದೆ. ಇದನ್ನು ಕಂಡು ಭಕ್ತರ ಗುಂಪು ಭಯಭೀತರಾಗಿ ಓಡಿದ್ದಾರೆ. ಕೆಲ ದೂರ ಹೋಗುತ್ತಿದ್ದಂತೆ ಮಾರ್ಗದಲ್ಲಿ ಕರಡಿಯೂ ಪ್ರತ್ಯಕ್ಷವಾಗಿದೆ. ಗಾಬರಿಗೊಂಡಿರುವ ಭಕ್ತರು ಟಿಡಿಪಿ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ತಿರುಮಲ ಬೆಟ್ಟದಲ್ಲಿ ಅಲಿಪಿಲಿ ಮಾರ್ಗದಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದ್ದು, ಚಿರತೆ, ಕರಡಿ ಹಾವಳಿಯಿಂದಾಗಿ ಭಕ್ತರು ಬೆಚ್ಚಿ ಬಿದ್ದಿದ್ದಾರೆ.