ಮಾಲ್ಡೀವ್ಸ್‌ನಲ್ಲಿ ರಜೆ ಕಳೆದ ಬಳಿಕ, ‘ಚಿನ್ನದ ಹುಡುಗ’ ನೀರಜ್ ಚೋಪ್ರಾ ಹೆಚ್ಚಿನ ಸಾಹಸಗಳಿಗೆ ಮುಂದಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಚೋಪ್ರಾ ಹಂಚಿಕೊಂಡ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಅವರು ದುಬೈನಲ್ಲಿ ತಮ್ಮ ಮೊದಲ ಸ್ಕೈ ಡೈವಿಂಗ್ ಅನುಭವವನ್ನು ಆನಂದಿಸುತ್ತಿರುವುದನ್ನು ಕಾಣಬಹುದು.
ಸ್ಕೈ ಡೈವಿಂಗ್ ಮಾಡುತ್ತಿರುವ ವಿಡಿಯೋವನ್ನು ನೀರಜ್ ಚೋಪ್ರಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಮಾನದಿಂದ ಜಿಗಿಯುವ ಮೊದಲು ನಾನು ಹೆದರುತ್ತಿದ್ದೆ, ಆದರೆ ನಂತರ ಅದು ಖುಷಿಯಾಯಿತು ಎಂದು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ. ಈ ಅನುಭವದಿಂದ ಹರ್ಷಗೊಂಡ ಚೋಪ್ರಾ, ತನ್ನ ಅಭಿಮಾನಿಗಳನ್ನು ದುಬೈನಲ್ಲಿ ಈ ಸಾಹಸವನ್ನು ಪ್ರಯತ್ನಿಸುವಂತೆ ಕೇಳಿಕೊಂಡಿದ್ದಾರೆ.
ತನ್ನ ಜರ್ಮನ್ ತರಬೇತುದಾರ ಕ್ಲಾಸ್ ಬಾರ್ಟೋನಿಯೆಟ್ಜ್ ಅವರನ್ನು ಅತ್ಯುತ್ತಮರು ಎಂದಿರುವ ನೀರಜ್ ಚೋಪ್ರಾ ಅವರು 2024 ರ ಪ್ಯಾರಿಸ್ ಕ್ರೀಡಾಕೂಟದಲ್ಲಿ ತಮ್ಮ ಅದ್ಭುತ ಆಟವನ್ನು ಮುಂದುವರಿಸಲು ಬಯಸುವುದಾಗಿ ಹೇಳಿದ್ದಾರೆ.
“ಕೋಚ್ ಕ್ಲಾಸ್ ಬಾರ್ಟೋನಿಯೆಟ್ಜ್ ತರಬೇತಿ ವಿಧಾನಗಳು ನನಗೆ ಸರಿಹೊಂದುತ್ತವೆ ಮತ್ತು ನಾನು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಮುಂದಿನ ಒಲಿಂಪಿಕ್ಸ್‌ಗಾಗಿ ನಾನು ಅವರೊಂದಿಗೆ ತರಬೇತಿಯನ್ನು ಮುಂದುವರಿಸಲು ಬಯಸುತ್ತೇನೆ” ಎಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಅಥ್ಲೆಟಿಕ್ಸ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಯುವ ತಾರೆ ನೀರಜ್ ಚೋಪ್ರಾ ಹೇಳಿದ್ದಾರೆ.