ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರಿಂದ ಐಪಿಎಸ್ ಅಧಿಕಾರಿಯಾಗಲು ಸಾಧ್ಯವಿಲ್ಲ ಎಂದು ತಿಳಿದ ಯುಪಿಎಸ್‌ಸಿ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದಾರೆ.
ಲಕ್ನೋ ನಿವಾಸಿ ಅಭಿಷೇಕ್ ಗೌತಮ್, 2020 ರಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ಬಂದರು. ಅವರು UPSC ಭೇದಿಸಿ IPS ಅಧಿಕಾರಿಯಾಗಲು ನಿರ್ಧರಿಸಿದ್ದರು. ಈ ಬಗ್ಗೆ ಮಹಾತ್ವಾಕಾಂಕ್ಷೆ ಹೊಂದಿದ್ದ ಅವರು ರಾಜಿಂದರ್ ನಗರದಲ್ಲಿನ ತಮ್ಮ ಬಾಡಿಗೆ ಕೋಣೆಯ ಗೋಡೆಗಳ ಮೇಲೆ ಅನೇಕ ಪ್ರಸಿದ್ಧ IPS ಅಧಿಕಾರಿಗಳ ಚಿತ್ರಗಳನ್ನು ಹಾಕಿಕೊಂಡಿದ್ದರು.
ಆದರೆ ಅಭಿಷೇಕ್ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ನಂತರ ಪರಿಸ್ಥಿತಿ ಬದಲಾಯಿತು. ಹಚ್ಚೆ ಹಾಕಿಸಿಕೊಂಡ ಮರುದಿನವೇ ಟ್ಯಾಟೂ ಹಾಕಿಸಿಕೊಂಡವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗುವುದಿಲ್ಲ ಎಂದು ಗೆಳೆಯ ಲಲಿತ್ ಮಿಶ್ರಾ ಹೇಳಿದ್ದಾರೆ. ಈ ವಿಷಯ ತಿಳಿದ ಆತ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರ ತನಿಖೆ ಪ್ರಕಾರ, ಐಪಿಎಸ್ ಆಯ್ಕೆ ಪ್ರಕ್ರಿಯೆಯಲ್ಲಿ ಟ್ಯಾಟೂಗಳ ಬಗ್ಗೆ, ನಿಯಮಗಳ ಬಗ್ಗೆ ಗೂಗಲ್‌ನಲ್ಲಿ ಅಭಿಷೇಕ್ ಹುಡುಕಿದ್ದಾರೆ. ಫೆಬ್ರವರಿ 25, 2021 ರಂದು ತನ್ನ ಕೋಣೆಯಲ್ಲಿ ನೇಣು ಹಾಕಿಕೊಳ್ಳುವ ಮೊದಲು ಅವರು ಹಚ್ಚೆ ತೆಗೆಯುವುದು ಹೇಗೆ, ತಂತ್ರಗಳು, ಸಾಧ್ಯತೆಗಳು ಮತ್ತು ಇದಕ್ಕೆ ತಗುಲುವ ವೆಚ್ಚವೆಷ್ಟು ಎಂಬುದನ್ನ ಹುಡುಕಿದ್ದಾರೆ. ಅಭಿಷೇಕ್ ಸಾವಿಗೂ ಮುನ್ನ ಯಾವುದೇ ಸೂಸೈಡ್ ನೋಟ್ ಕೂಡ ಹಾಕಿರಲಿಲ್ಲ.
ಅಭಿಷೇಕ್ ಅವರ ಕುಟುಂಬ ಸದಸ್ಯರು ಅವರ ಆತ್ಮಹತ್ಯೆಯ ಹಿಂದೆ ಪಿತೂರಿ ಎಂದು ಆರೋಪಿಸಿ ಕೊಲೆ ಪ್ರಕರಣವನ್ನು ದಾಖಲಿಸಿ ಅವರೊಂದಿಗೆ ವಾಸಿಸುವವರನ್ನು ಆರೋಪಿಗಳೆಂದು ಹೆಸರಿಸಿದ್ದರು.
ಆದರೆ, ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸಂಚು ರೂಪಿಸುವ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆರೋಪಿಗಳನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಪಿತೂರಿ ಬಗ್ಗೆ ಯಾವುದೇ ಅಂಶ ಕಂಡುಬಂದಿಲ್ಲ . ಆದ್ದರಿಂದ ಪೊಲೀಸರು ಈ ಪ್ರಕರಣವನ್ನು ಅಂತ್ಯಗೊಳಿಸುವ ವರದಿಯನ್ನು ಸಲ್ಲಿಸಿದ್ದಾರೆ.