ಅಹಮದಾಬಾದ್: ಗುಜರಾತ್ ಮಹಾನಗರ ಅಹಮದಾಬಾದ್ ನಲ್ಲಿ ದೀಪಾವಳಿ ನಂತರದಲ್ಲಿ ಕೊರೋನಾ ಹೊಸ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಅಹಮದಾಬಾದ್ ವ್ಯಾಪ್ತಿಯಲ್ಲಿ 57 ಗಂಟೆಗಳ ಕಾಲ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ಆದೇಶ ಹೊರಡಿಸಲಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ನವೆಂಬರ್ 23ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಜನರ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಹಾಲು ಮತ್ತು ಔಷಧ ಅಂಗಡಿ ಮಾತ್ರ ತೆರೆದಿರುತ್ತದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಗುಪ್ತಾ ಅವರು ಅಹಮದಾಬಾದ್ ಮಹಾನಗರ ಪಾಲಿಕೆ ಮೇಲ್ವಿಚಾರಣೆ ಬಗ್ಗೆ ಗುಜರಾತ್ ಸರ್ಕಾರದ ವಿಶೇಷ ಕರ್ತವ್ಯ ಅಧಿಕಾರಿ ಆಗಿ ನೇಮಕಗೊಂಡಿದ್ದಾರೆ. ಅವರು ನಗರದಲ್ಲಿ ಕೊರೋನಾ ಸೋಂಕು ಪ್ರಕರಣವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾರಂತ್ಯದ ಕರ್ಫ್ಯೂ ಜಾರಿಗೆ ಮುಂದಾಗಿದ್ದಾರೆ.
ಗುಜರಾತ್ ಸರ್ಕಾರ ನವೆಂಬರ್ 23 ರಿಂದ ಮಾಧ್ಯಮಿಕ ಶಾಲೆ ಮತ್ತು ಕಾಲೇಜುಗಳನ್ನು ತೆರೆಯಲು ನಿರ್ಧಾರ ಕೈಗೊಂಡಿತ್ತು. ಆದರೆ, ಸದ್ಯಕ್ಕೆ ಈ ನಿರ್ಧಾರವನ್ನು ತಡೆಹಿಡಿಯಲಾಗಿದೆ. ಮುಂದಿನ ಆದೇಶದವರೆಗೆ ಸೋಮವಾರದಿಂದ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ಕೊರೋನಾ ತಡೆಗೆ ನೈಟ್ ಕರ್ಫ್ಯೂ ವಿಧಿಸಲಾಗುವುದು ಎಂದು ಹೇಳಲಾಗಿದೆ.