ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ವಿರೋಧ ಪಕ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ನಿಂತಿದೆ.
ರಾಜ್ಯದಲ್ಲಿ ಉಂಟಾದ ಬಂಡಾಯದ ಬಾಧೆ ತಾಳದೇ ಇರುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಆದಾಗ್ಯೂ, ಭಾರತೀಯ ಜನತಾ ಪಕ್ಷದೊಂದಿಗೆ(ಬಿಜೆಪಿ) ಹಲವರು ಮಾತುಕತೆ ನಡೆಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕೂಡ ವಿಭಜನೆ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ಕೇಸರಿ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕೆಲ ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದು, ಈಗ ಮುಂದುವರಿದ ಹಂತದಲ್ಲಿದೆ.
ಏಕನಾಥ್ ಶಿಂಧೆ ಅವರ ದಂಗೆಯು ರಾಜ್ಯದಲ್ಲಿ ಆಡಳಿತ ಬದಲಾವಣೆಯನ್ನು ತಂದಾಗಿನಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಎದುರಿಸುತ್ತಿರುವ ಪಕ್ಷಾಂತರದ ಸಂಕಟಗಳಿಗೆ ಕಾರಣವಾಗಿದೆ.
ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ಅವರು, ಕಾಂಗ್ರೆಸ್‌ನ ಹಲವಾರು ನಾಯಕರು ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಾತ್ರವಲ್ಲದೆ ಹಲವಾರು ಜನರು ತಮ್ಮ ಪಕ್ಷಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಏಕೆಂದರೆ ಅವರ ನಾಯಕರು ಸ್ವಾರ್ಥದಿಂದ ತುಂಬಿದ್ದಾರೆ. ಅವರು ರಾಷ್ಟ್ರದ ಪ್ರಗತಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಕೂಡ ಪರಿಸ್ಥಿತಿಯನ್ನು ಅವಲೋಕಿಸಿದೆ ಮತ್ತು ಅಜಿತ್ ಪವಾರ್ ಬಂಡಾಯದ ಸುದ್ದಿ ಹೊರಬಂದಾಗಿನಿಂದ ತನ್ನ ಶಾಸಕರಿಗೆ ಹೆಚ್ಚಿನ ಭದ್ರತೆಯನ್ನು ನೀಡಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮಾತನಾಡಿ, ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ಅನ್ನು ಒಡೆಯಲು ಪ್ರಯತ್ನಿಸಿತ್ತು. ಆದರೆ ಮೂರನೇ ಎರಡರಷ್ಟು ಸಂಖ್ಯೆ 30 ಶಾಸಕರಾಗಿದ್ದು, ಅದು ಸುಲಭವಲ್ಲ. ಒಬ್ಬರು ಅಥವಾ ಇಬ್ಬರು ಸೇರಬಹುದು ಎಂದು ತಿಳಿಸಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸರ್ಕಾರವನ್ನು ಸೇರಿಕೊಂಡು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪಕ್ಷಾಂತರ ಮತ್ತು ವಿಭಜನೆಯ ಬೆಳವಣಿಗೆಗಳು ಮಹಾರಾಷ್ಟ್ರದ ರಾಜಕೀಯಕ್ಕೆ ಕೇಂದ್ರ ಸ್ಥಾನವನ್ನು ಪಡೆದಿವೆ.
ಏತನ್ಮಧ್ಯೆ, ಪವಾರ್ ಅವರಿಂದ ತೆರವಾಗಿದ್ದ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಾಂಗ್ರೆಸ್ ತನ್ನ ಕೈಗೆ ನೀಡಬೇಕೆಂದು ಒತ್ತಾಯಿಸುತ್ತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ನಾಯಕ ಬಾಳಾಸಾಹೇಬ್ ಥೋರಟ್ ಈ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ಎನ್‌ಸಿಪಿ ಮಹಾರಾಷ್ಟ್ರ ಕ್ಯಾಬಿನೆಟ್‌ನಲ್ಲಿ ಜಿತೇಂದ್ರ ಅವ್ಹಾದ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದೆ.