ಚೆನ್ನೈ: ಸನಾತನ ಧರ್ಮದ ಬಗ್ಗೆ ಬಿಜೆಪಿಯಿಂದ ಟೀಕೆಗಳನ್ನು ಎದುರಿಸಿದ ನಂತರ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಬಿಜೆಪಿಯನ್ನು ವಿಷಕಾರಿ ಹಾವು ಎಂದು ಜರೆದಿದ್ದಾರೆ.
ತಮಿಳುನಾಡಿನ ನೇವೇಲಿಯಲ್ಲಿ ಭಾನುವಾರ ನಡೆದ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ಕೇಸರಿ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ರು. ಪ್ರತಿಪಕ್ಷ ಎಐಎಡಿಎಂಕೆ ವಿರುದ್ಧ ಕಿಡಿಕಾರಿದ ಉದಯನಿಧಿ ಸ್ಟಾಲಿನ್, ಇದನ್ನು ಹಾವುಗಳಿಗೆ ಆಶ್ರಯ ನೀಡುವ ಕಸ ಎಂದು ಬಣ್ಣಿಸಿದರು.
ನಿಮ್ಮ ಮನೆಗೆ ವಿಷಪೂರಿತ ಹಾವು ಬಂದರೆ ಅದನ್ನು ಎಸೆದರೆ ಸಾಕಾಗುವುದಿಲ್ಲ. ಏಕೆಂದರೆ ಅದು ನಿಮ್ಮ ಮನೆಯ ಸಮೀಪವಿರುವ ಕಸದಲ್ಲಿ ಅಡಗಿಕೊಳ್ಳುತ್ತದೆ. ನೀವು ಪೊದೆಗಳನ್ನು ತೆರವುಗೊಳಿಸದ ಹೊರತು ಹಾವು ನಿಮ್ಮ ಮನೆಗೆ ಮರಳುತ್ತಲೇ ಇರುತ್ತದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಈಗ ಇದನ್ನು ಈಗಿನ ಪರಿಸ್ಥಿತಿಗೆ ತುಲನೆ ಮಾಡಿದ್ರೆ ತಮಿಳುನಾಡು ನಮ್ಮ ಮನೆ, ವಿಷಸರ್ಪ ಬಿಜೆಪಿ. ನಮ್ಮ ಮನೆಯ ಸಮೀಪದ ಕಸ ಎಐಎಡಿಎಂಕೆ. ಕಸವನ್ನು ತೆರವು ಮಾಡದ ಹೊರತು ವಿಷಕಾರಿ ಹಾವನ್ನು ದೂರವಿಡಲು ಸಾಧ್ಯವಿಲ್ಲ. ಬಿಜೆಪಿಯನ್ನು ತೊಡೆದುಹಾಕಲು, ನೀವು ಎಐಎಡಿಎಂಕೆಯನ್ನು ತೊಡೆದುಹಾಕಬೇಕು ಎಂದು ಅವರು ಹೇಳಿದ್ರು.
ಕೆಲ ದಿನಗಳ ಹಿಂದೆ ಲೋಕಸಭೆ ಸಂಸದ ಮತ್ತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ. ರಾಜಾ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಹಾವಿಗೆ ಹೋಲಿಸಿದ್ದರು. ಮೋದಿ ಎಂಬ ಹಾವನ್ನು ಹೊಡೆಯಲು ಎಲ್ಲರೂ ಸಿದ್ಧರಾಗಿದ್ದಾರೆ, ಆದರೆ, ಹಾವು ಕಡಿತಕ್ಕೆ ಯಾರ ಬಳಿಯೂ ಪ್ರತಿವಿಷವಿಲ್ಲ. ಅವರೆಲ್ಲರೂ ಕೋಲುಗಳೊಂದಿಗೆ ಸಮೀಪಿಸುತ್ತಾರೆ. ಹಾವು ಕಚ್ಚುತ್ತದೆ ಎಂದು ಭಯಪಡುತ್ತಾರೆ. ಅದಕ್ಕೆ ಯಾರ ಬಳಿಯೂ ಪರಿಹಾರವಿಲ್ಲ ಎಂದು ಹೇಳಿದ್ದರು.
ಇನ್ನು ತಮ್ಮ ಸನಾತನ ಧರ್ಮದ ಹೇಳಿಕೆಯ ಕುರಿತು ಮಾತನಾಡಿದ ಉದಯನಿಧಿ ಸ್ಟಾಲಿನ್, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಮಾತುಗಳನ್ನು ತಿರುಚಲಾಗಿದೆ. ನಾನು ನರಮೇಧಕ್ಕೆ ಕರೆ ನೀಡಿದ್ದೇನೆ ಎಂದು ಸುಳ್ಳು ಹೇಳಲಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದ ಐದು ತಿಂಗಳಿನಿಂದ ಬಿಜೆಪಿ ಆಡಳಿತ ನಡೆಸುತ್ತಿರುವ ಮಣಿಪುರದಲ್ಲಿ ನರಮೇಧ ನಡೆಯುತ್ತಿದೆ. ಅಲ್ಲಿ ನೂರಾರು ಜನರು ದುರಂತವಾಗಿ ಬಲಿಯಾಗಿದ್ದಾರೆ ಎಂದು ಹೇಳಿದ್ರು.