ನವದೆಹಲಿ: ಪಂಜಾಬ್ ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಅಮರಿಂದರ್ ಸಿಂಗ್ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಅವರು ಕಾಂಗ್ರೆಸ್ ಪಕ್ಷದ ಜಿ23 ನಾಯಕರನ್ನು ಕೂಡ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ತಿರುಗಿ ಬಿದ್ದಿರುವ 23 ನಾಯಕರ ಜೊತೆಗೆ ಅಮರೀಂದರ್ ಸಿಂಗ್ ಸಮಾಲೋಚನೆ ನಡೆಸಲಿದ್ದಾರೆ. ಇವತ್ತು ಇದೇ ಗುಂಪಿನ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಹೈಕಮಾಂಡ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಗೆ ಅಧ್ಯಕ್ಷರೇ ಇಲ್ಲ, ನಿರ್ಧಾರ ಕೈಗೊಳ್ಳುವವರು ಯಾರು ಎಂದು ಪ್ರಶ್ನಿಸಿದ್ದರು.
ಪಂಜಾಬ್ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ತಮ್ಮ ಮಾತು ನಡೆಯದ ಕಾರಣಕ್ಕೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ. ಅವರನ್ನು ಬೆಂಬಲಿಸಿ ಇಬ್ಬರು ಸಚಿವರು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಕೂಡ ರಾಜೀನಾಮೆ ನೀಡಿದ್ದಾರೆ.
ಇವೆಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮತ್ತೊಂದು ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಬಿಕ್ಕಟ್ಟು ಉಂಟಾಗಿದೆ. ಛತ್ತೀಸ್ ಗಢದ ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಭೂಪೇಶ್ ಬಘೇಲ್ ಬೆಂಬಲಿಗರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದು, ನಂತರ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.