ಪ್ರತಿ ಕೆಜಿ ತೂಕ ಇಳಿಸಲು 1000 ಕೋಟಿ ರೂಪಾಯಿಗಳ ಅಭಿವೃದ್ಧಿ ನಿಧಿಯನ್ನು ಕೊಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ ನಂತರ ಉಜ್ಜಯಿನಿ ಸಂಸದ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ ಅವರು ತೂಕ ಇಳಿಸಿಕೊಂಡರೆ ಪ್ರತಿ ಕೆಜಿಗೆ 1 ಸಾವಿರ ಕೋಟಿ ರೂ.ಗಳನ್ನು ಕ್ಷೇತ್ರದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತಮ್ಮ ಸಚಿವಾಲಯವು ಮಂಜೂರು ಮಾಡಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು.
ಇದರಿಂದ ಉತ್ತೇಜಿತಗೊಂಡ ಸಂಸದ ಅನಿಲ್ ಅವರು 15 ಕೆಜಿಯಷ್ಟು ಹಗುರವಾಗಿದ್ದು, 15 ಸಾವಿರ ಕೋಟಿ ರೂ. ಕೇಳಲು ಅರ್ಹರಾಗಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಕೆಲವು ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಗಡ್ಕರಿ ಅವರು ಭರವಸೆ ನೀಡಿದ ನಂತರ ತೂಕ ಇಳಿಸಿಕೊಳ್ಳುವ ಸವಾಲು ಪ್ರಾರಂಭವಾಯಿತು. ಮೊದಲ ಬಾರಿಗೆ ಸಂಸದರಾಗಿರುವ ಫಿರೋಜಿಯಾ ಅವರು ಫೆಬ್ರವರಿಯಲ್ಲಿ 127 ಕೆಜಿ ತೂಕ ಹೊಂದಿದ್ದರು.
ನಾನು ಫಿಟ್ ಆಗುವಂತೆ ಪ್ರೇರೇಪಿಸಲು ಫೆಬ್ರವರಿಯಲ್ಲಿ ಗಡ್ಕರಿ ಈ ಘೋಷಣೆ ಮಾಡಿದ್ದರು. ನಾನು ಕಳೆದುಕೊಂಡ ಪ್ರತಿ ಕಿಲೋಗ್ರಾಂ ತೂಕದ ಅಭಿವೃದ್ಧಿ ಕಾಮಗಾರಿಗಳಿಗೆ 1,000 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಅವರು ಹೇಳಿದ್ದರು. ನಾನು ಅವರ ಆದೇಶವನ್ನು ಒಪ್ಪಿಕೊಂಡಿದ್ದೇನೆ. ಕಳೆದ ನಾಲ್ಕು ತಿಂಗಳಲ್ಲಿ 15 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿದ್ದೇನೆ ಎಂದು ಅನಿಲ್ ಹೇಳಿದರು.
ಆಹಾರ ಕ್ರಮ ಅನುಸರಿಸುವ ಜೊತೆಗೆ ದೈಹಿಕ ವ್ಯಾಯಾಮ, ಸೈಕ್ಲಿಂಗ್ ಮತ್ತು ಯೋಗದಲ್ಲಿ ತೊಡಗಿರುವ ಫಿಟ್ ನೆಸ್ ಅಳವಡಿಸಿಕೊಳ್ಳುವ ಮೂಲಕ ಇದನ್ನು ಸಾಧಿಸುತ್ತಿದ್ದೇನೆ. ನಾನು ಮೊದಲು 127 ಕಿಲೋಗ್ರಾಂಗಳಷ್ಟು ತೂಕ ಹೊಂದಿದ್ದೆ. ಈಗ ನಾನು 15 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ 15,000 ಕೋಟಿ ರೂ. ಕೇಳಲು ನಾನು ಅರ್ಹನಾಗಿದ್ದೇನೆ. ಎಂದು ತಿಳಿಸಿದ್ದಾರೆ.