ಫೆಬ್ರವರಿ 21 ರಿಂದ ಆಸ್ಟ್ರೇಲಿಯಾ ತನ್ನ ಗಡಿಗಳನ್ನು ಮತ್ತೆ ತೆರೆಯಲಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಸೋಮವಾರ ಘೋಷಿಸಿದ್ದಾರೆ. ಈ ಮೂಲಕ ವಿಶ್ವದ ಕಟ್ಟುನಿಟ್ಟಾದ ಹಾಗೂ ದೀರ್ಘಾವಧಿಯ ಸಾಂಕ್ರಾಮಿಕ ಪ್ರಯಾಣ ನಿರ್ಬಂಧಗಳನ್ನು ಕೊನೆಗೊಳಿಸಿದ್ದಾರೆ.
‘ನಾವು ಆಸ್ಟ್ರೇಲಿಯಾದ ಗಡಿಗಳನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡು ಸುಮಾರು ಎರಡು ವರ್ಷಗಳಾದವು. ಈ ವರ್ಷದ ಫೆಬ್ರವರಿ 21 ರಂದು ಆಸ್ಟ್ರೇಲಿಯಾವು, ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರವಾಸಿಗರಿಗೆ, ನಮ್ಮ ಗಡಿಗಳನ್ನು ಪುನಃ ತೆರೆಯುತ್ತದೆ ಎಂದು ಮಾರಿಸನ್ ಹೇಳಿದ್ದಾರೆ.
2020 ರ ಮಾರ್ಚ್‌ನಲ್ಲಿ ತನ್ನ ಗಡಿಗಳನ್ನು ಮುಚ್ಚಿರುವ ಆಸ್ಟ್ರೇಲಿಯಾ, ಇತ್ತೀಚಿನ ತಿಂಗಳುಗಳಲ್ಲಿ ಪುನರಾರಂಭದ ಹಾದಿಯಲ್ಲಿ ಸಾಗುತ್ತಿದೆ. ಅತ್ಯಂತ ಕಟ್ಟುನಿಟ್ಟಿನ ಪ್ರಯಾಣ ನಿರ್ಬಂಧಗಳನ್ನು ಹೇರಿರುವ ಆಸ್ಟ್ರೇಲಿಯಾ ತನ್ನ ನಾಗರಿಕರು ಮತ್ತು ನಿವಾಸಿಗಳು, ನುರಿತ ವಲಸಿಗರು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಕೆಲವು ಸೀಸನಲ್ ಕೆಲಸಗಾರರಿಗೆ ಮಾತ್ರ ಪ್ರಯಾಣದ ಅವಕಾಶ ನೀಡುತ್ತಿದೆ.
ಕೋವಿಡ್ ಲಸಿಕೆಗೆ ಹೆಚ್ಚು ಒತ್ತು ನೀಡಿರುವ ದೇಶವು, ವ್ಯಾಕ್ಸಿನ್ ಅನ್ನು ಕಡ್ಡಾಯ ಮಾಡಿದೆ. 16 ವರ್ಷ ಮೇಲ್ಪಟ್ಟವರನ್ನು ಲಸಿಕೆಗೆ ಅರ್ಹರು ಎಂದು ಗುರುತಿಸಿರುವ ಆಸ್ಟ್ರೇಲಿಯಾದಲ್ಲಿ 95% ಅರ್ಹ ಜನಸಂಖ್ಯೆ ಈಗಾಗಲೇ ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ. ಜೊತೆಗೆ ಒಂಭತ್ತು ಮಿಲಿಯನ್ ಜನರಿಗೆ ಬೂಸ್ಟರ್ ಡೋಸ್ ಸಹ ನೀಡಲಾಗಿದೆ.
ಗಡಿ ನಿರ್ಬಂಧಗಳನ್ನು ವಾಪಸ್ಸು ಪಡೆದಿರುವ ಸರ್ಕಾರವು, ಆಸ್ಟ್ರೇಲಿಯಾವನ್ನು ಪ್ರವೇಶಿಸಲು ಪ್ರಸ್ತುತ ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರು ಲಸಿಕೆ ಪಡೆದುಕೊಂಡಿರಬೇಕು. ಇಲ್ಲವೇ ವ್ಯಾಕ್ಸಿನೇಷನ್ ವಿನಾಯಿತಿಯ ವೈದ್ಯಕೀಯ ಪುರಾವೆಗಳನ್ನು ಒದಗಿಸಬೇಕು ಎಂಬ ಕ್ರಮ ಜರುಗಿಸಿದೆ. ಕೋವಿಡ್ ವೈರಸ್ನ ಹೊಸ ರೂಪಾಂತರ ಒಮಿಕ್ರಾನ್ ಹರಡುತ್ತಿರುವಾಗಲೂ ಆಸ್ಟ್ರೇಲಿಯಾದಲ್ಲಿ ಆಸ್ಪತ್ರೆ ದಾಖಲಾತಿ ಮತ್ತು ಸಾವುಗಳು ಸ್ಥಿರಗೊಳ್ಳುತ್ತಿವೆ ಎಂಬುದು ಗಮನಾರ್ಹ.