ಕೊಚ್ಚಿ: ಕೇರಳದ ಅಲಪ್ಪುಳದಲ್ಲಿ ಬಿಜೆಪಿ ಮುಖಂಡನನ್ನು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮುಖಂಡರೊಬ್ಬರ ಮೇಲೆ ದಾಳಿ ನಡೆಸಿ ನಂತರ ಹತ್ಯೆ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಎರಡು ಹತ್ಯೆಗಳ ನಂತರ, ಭಾನುವಾರ ಇಡೀ ಅಲಪ್ಪುಳ ಜಿಲ್ಲೆಯಲ್ಲಿ CRPC ಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಮೃತರನ್ನು ಬಿಜೆಪಿಯ ಒಬಿಸಿ ಮೋರ್ಚಾ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಅವರ ಮನೆಗೆ ನುಗ್ಗಿದ ಗುಂಪೊಂದು ಆತನ ಕತ್ತು ಕೊಯ್ದು ಹತ್ಯೆ ಮಾಡಿದೆ.
ಶನಿವಾರದಂದು ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಅವರ ಮೇಲೆ ಅಲಪ್ಪುಳ ಜಿಲ್ಲೆಯಲ್ಲಿ ಅಪರಿಚಿತ ತಂಡವೊಂದು ದಾಳಿ ನಡೆಸಿತ್ತು. ಭಾನುವಾರ ಬೆಳಗಿನ ಜಾವ ಅವರು ಮೃತಪಟ್ಟಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲಪ್ಪುಳದಲ್ಲಿ ನಡೆದ ಭೀಕರ ಹತ್ಯೆಯನ್ನು ಖಂಡಿಸಿದ್ದಾರೆ. ದಾಳಿಯ ಹಿಂದಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಇಂತಹ ಅಮಾನವೀಯ ಕೃತ್ಯಗಳು ರಾಜ್ಯಕ್ಕೆ ಹಾನಿಕಾರಕವಾಗಿದೆ. ಇಂತಹ ಕೃತ್ಯವೆಸಗುವವರನ್ನು ನಾಗರಿಕ ಸಮಾಜದಿಂದ ದೂರ ಇಡಬೇಕು ಎಂದು ಅವರು ಹೇಳಿದ್ದಾರೆ.