ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎನ್.ಸಿ.ಪಿ. ಜೊತೆಗೂಡಿ ಅಧಿಕಾರ ಅನುಭವಿಸುತ್ತಿದ್ದ ಕಾಂಗ್ರೆಸ್ ಶಿವಸೇನೆ ಶಾಸಕರ ಬಂಡಾಯದಿಂದಾಗಿ ಸರ್ಕಾರ ಪತನಗೊಂಡಿದೆ. ಜೊತೆಗೆ ವಿಶ್ವಾಸ ಮತ್ತು ಯೋಚನೆ ವೇಳೆ ಕಾಂಗ್ರೆಸ್ ನ ಕೆಲ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೀಗ ಗೋವಾದಲ್ಲೂ ಕಾಂಗ್ರೆಸ್ ಗೆ ಸಂಕಷ್ಟ ಎದುರಾಗಿದ್ದು, ಪಕ್ಷದ ಐದು ಮಂದಿ ಶಾಸಕರು ಬಂಡಾಯವೆದ್ದು ಆಡಳಿತರೂಢ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಕಾಂಗ್ರೆಸ್ ತನ್ನ ವಿಪಕ್ಷ ನಾಯಕನನ್ನೇ ಆ ಸ್ಥಾನದಿಂದ ವಜಾ ಮಾಡಿದೆ.
ಬಿಜೆಪಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಕಾರಣಕ್ಕೆ ವಿಪಕ್ಷ ನಾಯಕರಾಗಿದ್ದ ಮೈಕೆಲ್ ಲೋಬೋ ಅವರನ್ನು ಕಾಂಗ್ರೆಸ್, ವಿಪಕ್ಷ ನಾಯಕನ ಸ್ಥಾನದಿಂದ ವಜಾ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.
ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿರುವ ದಿಗಂಬರ್ ಕಾಮತ್ ಜೊತೆಗೆ ಲೋಬೋ ಸೇರಿದಂತೆ ಒಟ್ಟು ನಾಲ್ಕು ಮಂದಿ ಶಾಸಕರು ‘ಕೈ’ ಜೋಡಿಸಿದ್ದಾರೆ ಎನ್ನಲಾಗಿದ್ದು, ಇವರೆಲ್ಲರೂ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಆದರೆ 11 ಕಾಂಗ್ರೆಸ್ ಶಾಸಕರ ಪೈಕಿ 8 ಮಂದಿ ಸೇರಿದರೆ ಮಾತ್ರ ಅನರ್ಹತೆಯಿಂದ ಪಾರಾಗಬೇಕಿದ್ದು, ಹೀಗಾಗಿ ಮತ್ತಷ್ಟು ಶಾಸಕರು ಪಕ್ಷ ತೊರೆಯುವ ಭೀತಿ ಕಾಂಗ್ರೆಸ್ ನಾಯಕರಿಗೆ ಎದುರಾಗಿದೆ.