ಅಹಮದಾಬಾದ್: ಸೌಲಭ್ಯಗಳ ಕೊರತೆಯಿಂದ ಒಂದು ವರ್ಷದ ಹಿಂದೆ ತನ್ನ ಮುದ್ದಿನ ನಾಯಿಯನ್ನು ಕಳೆದುಕೊಂಡ ನಂತರ ವ್ಯಕ್ತಿಯೊಬ್ಬರು ಗುಜರಾತ್ ನ ಅಹಮದಾಬಾದ್ನಲ್ಲಿ ಭಾರತದ ಮೊದಲ ಪಶುವೈದ್ಯಕೀಯ ವೆಂಟಿಲೇಟರ್ ಆಸ್ಪತ್ರೆಯನ್ನು ತೆರೆದಿದ್ದಾರೆ.
ಸಾಕುಪ್ರಾಣಿಗಳಿಗೆಂದೇ ನಿರ್ಮಾಣವಾಗಿರುವ ಈ ಆಸ್ಪತ್ರೆಯಲ್ಲಿ, ಸಂಪೂರ್ಣ ಸುಸಜ್ಜಿತ ಕೊಠಡಿಗಳು ಹಾಗೂ ಭಾರತದ ಮೊದಲ ಪ್ರಾಣಿ ವೆಟ್ ವೆಂಟಿಲೇಟರ್ನೊಂದಿಗೆ ಪಶುವೈದ್ಯಕೀಯ ಆಸ್ಪತ್ರೆಯನ್ನು ತೆರೆಯಲಾಗಿದೆ.
ಒಂದು ವರ್ಷದ ಹಿಂದೆ ತನ್ನ ನಾಯಿಯನ್ನು ಕಳೆದುಕೊಂಡಾಗ ಸಾಕುಪ್ರಾಣಿಗಳಿಗಾಗಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಮಾಡಿದರೆ ಹೇಗೆ ಎಂಬ ಆಲೋಚನೆ ಶೈವಲ್ ದೇಸಾಯಿ ಅವರಿಗೆ ಹೊಳೆದಿದೆ. ಸೂಕ್ತ ಸೌಲಭ್ಯವಿಲ್ಲದೇ ಇದ್ದುದರಿಂದ ತನ್ನ ನಾಯಿಯನ್ನು ಕಳೆದುಕೊಂಡಿದ್ದು ಬಹಳ ನೋವಿನ ವಿಚಾರವಾಗಿತ್ತು. ಹೀಗಾಗಿ ಸಾಕುಪ್ರಾಣಿಗಳಿಗೆಂದೇ ಈ ಆಸ್ಪತ್ರೆಯನ್ನು ತೆರೆಯಲಾಗಿದೆ ಎಂದು ಬೆಸ್ಟ್ಬಡ್ಸ್ ಪೆಟ್ ಹಾಸ್ಪಿಟಲ್’ ಸಂಸ್ಥಾಪಕ ಶೈವಲ್ ದೇಸಾಯಿ ಹೇಳಿದ್ದಾರೆ.
ಇನ್ನು, ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದ ಸಮಯದಲ್ಲಿ ಹಲವಾರು ಮಂದಿ ನಾಯಿಗಳಿಂದ ಕೊರೋನಾ ವೈರಸ್ ಹರಡಬಹುದು ಎಂಬ ವದಂತಿಯಿಂದ ಹೆದರಿ, ನಾಯಿಗಳನ್ನು ಮನೆಯಿಂದ ಹೊರಹಾಕಿದ್ದರು. ಇಂತಹ ವದಂತಿಗಳನ್ನು ನಂಬಿ ತಮ್ಮ ಸಾಕುಪ್ರಾಣಿಗಳನ್ನು ತ್ಯಜಿಸದಂತೆ ಡಾ.ದಿವ್ಯೇಶ್ ಮನವಿ ಮಾಡಿದ್ದಾರೆ.