
ಜಿನೀವಾ: ಗಾಯಗೊಂಡು ಆಸ್ಪತ್ರೆಯಲ್ಲಿರುವ ರೋಗಿಗಳನ್ನು ದಕ್ಷಿಣ ಗಾಜಾ ಪಟ್ಟಿಗೆ ಸ್ಥಳಾಂತರಿಸುವುದು ಅಸಾಧ್ಯವೆಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು WHO ಗೆ ತಿಳಿಸಿದ್ದಾರೆ ಎಂದು ಯುಎನ್ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ಇಸ್ರೇಲ್ ಇತಿಹಾಸದಲ್ಲಿಯೇ ಹಮಾಸ್ ವಿರುದ್ಧ ಅತ್ಯಂತ ಭೀಕರ ದಾಳಿಗೆ ಗಾಜಾಪಟ್ಟಿ ತುತ್ತಾಗಿದ್ದು, ಅಲ್ಲಿನ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಸ್ಥಳಾವಕಾಶ ಇಲ್ಲವಾಗಿದೆ. ಪ್ರತೀಕಾರದ ಮುಂದುವರೆದ ಭಾಗವಾಗಿ ನಿರೀಕ್ಷಿತ ಆಕ್ರಮಣಕ್ಕೆ ಮುಂಚಿತವಾಗಿ ಉತ್ತರ ಗಾಜಾ ಪಟ್ಟಿಯನ್ನು ತೊರೆಯಲು ಪ್ಯಾಲೆಸ್ಟೀನಿಯಾದವರಿಗೆ ಇಸ್ರೇಲ್ 24 ಗಂಟೆಗಳ ಕಾಲಾವಕಾಶ ನೀಡಿದೆ.
ಗಾಜಾ ಪಟ್ಟಿಯ ಉತ್ತರದಲ್ಲಿರುವ ಎರಡು ಪ್ರಮುಖ ಆಸ್ಪತ್ರೆಗಳು ಈಗಾಗಲೇ ತಮ್ಮ ಸಂಯೋಜಿತ 760 ಹಾಸಿಗೆಗಳ ಸಾಮರ್ಥ್ಯವನ್ನು ಮೀರಿದೆ, ಮತ್ತು ಗಾಜಾದ ದಕ್ಷಿಣದಲ್ಲಿರುವ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ ಎಂದು WHO ವಕ್ತಾರ ತಾರಿಕ್ ಜಸರೆವಿಕ್ ಜಿನೀವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆಸ್ಪತ್ರೆಗಳಲ್ಲಿ ತೀವ್ರವಾಗಿ ಅಸ್ವಸ್ಥರಾಗಿರುವ ಜನರಿದ್ದಾರೆ. ವೆಂಟಿಲೇಟರ್‌ಗಳಂತಹ ಜೀವ ರಕ್ಷಕ ಬೆಂಬಲದಲ್ಲಿ ಹೆಚ್ಚಿನವರಿದ್ದಾರೆ. ಅಂತಹವರನ್ನು ಸ್ಥಳಾಂತರಿಸುವುದು ಅಂತಹವರನ್ನು ಸ್ಥಳಾಂತರಿಸುವುದು ಅವರಿಗೆ ಮರಣದಂಡನೆ ನೀಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ವೈಮಾನಿಕ ದಾಳಿಗಳಿಂದ ನಾಗರಿಕರಿಗೆ ಹೋಗಲು ಸುರಕ್ಷಿತ ಸ್ಥಳವಿಲ್ಲ. ಗಾಜಾದ ಉತ್ತರದ ಆಸ್ಪತ್ರೆಗಳಲ್ಲಿನ ರೋಗಿಗಳನ್ನು ಸ್ಥಳಾಂತರಿಸುವುದು ಅಸಾಧ್ಯವೆಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು WHO ಗೆ ತಿಳಿಸಿದೆ ಎಂದು ತಾರಿಕ್ ಜಸರೆವಿಕ್ ಮಾಹಿತಿ ನೀಡಿದ್ದಾರೆ.
ಗಾಜಾದ ಉತ್ತರದಲ್ಲಿ ವಾಸಿಸುವ 1.1 ಮಿಲಿಯನ್ ಜನರನ್ನು ಮುಂದಿನ 24 ಗಂಟೆಗಳಲ್ಲಿ ಸ್ಥಳಾಂತರಿಸುವ ಆದೇಶಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಇಸ್ರೇಲ್ ಗೆ ಮನವಿ ಮಾಡಿದ್ದು, ವಿಶ್ವಸಂಸ್ಥೆಗೂ ಕ್ರಮಕ್ಕೆ ಕೋರಲಾಗಿದೆ. ಸಂಪೂರ್ಣ ದಿಗ್ಬಂಧನದ ನಡುವೆ ಗಾಜಾ ಪಟ್ಟಿಗೆ ಇಂಧನ, ನೀರು, ಆಹಾರ ಮತ್ತು ಜೀವ ಉಳಿಸುವ ಆರೋಗ್ಯ ಮತ್ತು ಮಾನವೀಯ ಸರಬರಾಜುಗಳನ್ನು ತುರ್ತಾಗಿ ತಲುಪಿಸಲು ಸಾಧ್ಯವಾಗದಿದ್ದರೆ ಮಾನವೀಯ ದುರಂತವನ್ನು ತಡೆಯಲು ಸಮಯ ಮೀರಿದೆ. ನಾವು ದುಬೈನಲ್ಲಿ ನಮ್ಮ ಲಾಜಿಸ್ಟಿಕ್ಸ್ ಹಬ್ ಹೊಂದಿದ್ದೇವೆ ಮತ್ತು ನಮಗೆ ಸಿಗ್ನಲ್ ಸಿಕ್ಕ ತಕ್ಷಣ ನಾವು ತಲುಪಿಸಲು ಸಿದ್ಧರಿದ್ದೇವೆ ಎಂದು ಜಸರೆವಿಕ್ ಹೇಳಿದ್ದಾರೆ.