ಸ್ವಾತಂತ್ರ್ಯ ದಿನಾಚರಣೆ ಎಂದಾಕ್ಷಣ ಮಕ್ಕಳಲ್ಲಿ ಸಡಗರ ಸಂಭ್ರಮ ತುಂಬಿರುತ್ತದೆ. ಧ್ವಜಾರೋಹಣದ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆ. ಇದರ ಜೊತೆಗೆ ಶಾಲೆಯಲ್ಲಿ ವಿತರಿಸುವ ಚಾಕಲೇಟ್ ಮತ್ತಿತರ ಸಿಹಿ ತಿನಿಸುಗಳಿಗಾಗಿ ವಿದ್ಯಾರ್ಥಿಗಳು ಕಾತರರಾಗಿರುತ್ತಾರೆ. ಆದರೆ ಬಿಹಾರದ ಬಕ್ಸಾರ್‌ನಲ್ಲಿ ವಿಲಕ್ಷಣ ಘಟನೆ ನಡೆದಿದೆ.
ಸ್ವಾತಂತ್ರ್ಯ ದಿನದಂದು ಸಿಹಿ ಹಂಚದೇ ಇದ್ದಿದ್ದಕ್ಕೆ ಕೋಪಗೊಂಡ ಮಕ್ಕಳು ಶಿಕ್ಷಕರನ್ನೇ ಥಳಿಸಿದ್ದಾರೆ. ಬಕ್ಸಾರ್‌ನ ಮುರಾರ್ ಪ್ರೌಢಶಾಲೆಯಲ್ಲಿ ನಡೆದ ಘಟನೆ ಇದು. ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಸಮಾರಂಭದ ನಂತರ ಮುಖ್ಯ ಗೇಟ್‌ನಿಂದ ಹೊರಗೆ ನಿಂತಿದ್ದ ಕೆಲವು ಮಕ್ಕಳು ಶಿಕ್ಷಕರ ಬಳಿ ಸಿಹಿ ಕೇಳಿದರು. ಆದರೆ ಶಿಕ್ಷಕರು ಸಿಹಿ ಕೊಡಲು ನಿರಾಕರಿಸಿದರು. ಈ ಶಾಲೆಯ ವಿದ್ಯಾರ್ಥಿಗಳಲ್ಲದ ಕಾರಣ ಸಿಹಿ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶಿಕ್ಷಕರೊಬ್ಬರು ಸ್ಥಳದಲ್ಲಿ ಕುಸಿದು ಬಿದ್ದರು. ಇದನ್ನು ಗಮನಿಸಿದ ಶಿಕ್ಷಕ ಪಂಕಜ್ ಕುಮಾರ್ ಮಕ್ಕಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಮಕ್ಕಳೆಲ್ಲ ಸೇರಿ ಶಿಕ್ಷಕ ಪಂಕಜ್‌ರನ್ನು ಥಳಿಸಿದ್ದಾರೆ.
ಘಟನೆಯ ಕುರಿತಂತೆ ಶಿಕ್ಷಕರು ಮುರಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಠಾಣೆಯಲ್ಲಿ ಕೂಡ ಧ್ವಜಾರೋಹಣ ನಡೆಯುತ್ತಿದ್ದುದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವುದು ವಿಳಂಬವಾಯ್ತು. ಶಿಕ್ಷಕರೇ ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.