ಭುವನೇಶ್ವರ: ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಗೋಡೆಗಳ ಮೇಲೆ ಬರೆದ ಬ್ರಾಹ್ಮಣ ವಿರೋಧಿ ಘೋಷಣೆಗಳಿಂದ ಅಹಿತಕರ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆ ವಿಶ್ವವಿದ್ಯಾಲಯಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ.
ವಿಶ್ವವಿದ್ಯಾನಿಲಯದ ಗೋಡೆಗಳಿಗೆ ಕೆಂಪು ಬಣ್ಣವನ್ನು ಬಳಿಯಲಾಗಿದ್ದು, “ಬ್ರಾಹ್ಮಣರೇ ನಿಮ್ಮ ಸಮಾಧಿಯನ್ನು ಬಿಎಚ್ ಯು ಮೈದಾನದಲ್ಲಿ ಅಗೆಯಲಾಗುತ್ತದೆ ಮತ್ತು ಕಾಶ್ಮೀರ ಕೇವಲ ಟ್ರೈಲರ್, ಉಳಿದ ಭಾರತವು ಉಳಿದಿದೆ” ಎಂದು ಬರೆದಿದ್ದು ಈ ಘೋಷಣೆಗೆ ವಿರೋಧ ವ್ಯಕ್ತವಾಗಿದೆ.
ಮಹಿಳಾ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಬಿ ಎಚ್ ಯು ಉಪಕುಲಪತಿ ಭಾಗವಹಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಬಿ ಎಚ್ ಯು ವಿದ್ಯಾರ್ಥಿಗಳು ಉಪಕುಲಪತಿಯ ಈ ನಡೆಯನ್ನು ಹಿಂದೂ ವಿರೋಧಿ ಎಂದು ಕರೆದು ಉಪಕುಲಪತಿಗಳ ಪ್ರತಿಕೃತಿಯನ್ನು ದಹಿಸಿದ್ದರು.
ವಿಶ್ವವಿದ್ಯಾನಿಲಯದ ಗೋಡೆಗಳ ಮೇಲಿನ ಈ ಘೋಷಣೆಗಳನ್ನು ಭಗತ್ ಸಿಂಗ್ ಛಾತ್ರ ಮೋರ್ಚಾ ಸದಸ್ಯರು ಬರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣ ವಿಶ್ವವಿದ್ಯಾಲಯ ಕ್ಯಾಂಪಸ್ ಸುತ್ತ ಮುತ್ತ ಭಾರೀ ಭದ್ರತೆ ನಿಯೋಜಿಸಲಾಗಿದೆ.
ಇಫ್ತಾರ್ ಕೂಟದಲ್ಲಿ ವಿಸಿ ಭಾಗವಹಿಸಿದ್ದಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ, “ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಹಲವು ವರ್ಷಗಳಿಂದ ರೋಜಾ ಇಫ್ತಾರ್ ಅನ್ನು ಆಯೋಜಿಸುತ್ತಿದೆ ಮತ್ತು ಬಿಎಚ್ ಯು ಕುಟುಂಬದ ಮುಖ್ಯಸ್ಥರಾಗಿ ಉಪಕುಲಪತಿಗಳು ಕ್ಯಾಂಪಸ್ ನಲ್ಲಿ ಲಭ್ಯವಿದ್ದಾಗ ಭಾಗವಹಿಸುತ್ತಾರೆ. ಈ ಹಿಂದೆ ಹಲವು ಬಾರಿ ವಿವಿಧ ಉಪಕುಲಪತಿಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಕುಳಿತು ಇಫ್ತಾರ್ ಸವಿದಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮತ್ತು ಸಾಮರಸ್ಯದ ವಾತಾವರಣವನ್ನು ಹಾಳು ಮಾಡುವ ಪ್ರಯತ್ನ ಖಂಡನೀಯ ಎಂದು ವಿಶ್ವವಿದ್ಯಾಲಯವು ಹೇಳಿದೆ.