
ನವದೆಹಲಿ: ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿ ಅವರ ಚಿತ್ರದ ಬದಲಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರ ಮುದ್ರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ(ಎಬಿಹೆಚ್‌ಎಂ) ಶುಕ್ರವಾರ ಒತ್ತಾಯಿಸಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ರಾಷ್ಟ್ರಪಿತನಿಗಿಂತ ಕಡಿಮೆಯಿಲ್ಲ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿದೆ.
ಎಬಿಹೆಚ್‌ಎಂ ಆಯೋಜಿಸಿದ್ದ ದುರ್ಗಾ ಪೂಜೆಯಲ್ಲಿ ಮಹಾತ್ಮಾ ಗಾಂಧಿಯನ್ನು ಹೋಲುವ ಮಹಿಷಾಸುರ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಗ್ಗೆ ಆಕ್ರೋಶ ವ್ಯಕ್ತವಾದ ವಾರಗಳ ನಂತರ ಸಂಘಟನೆಯಿಂದ ಬೇಡಿಕೆ ಬಂದಿದೆ.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಕೊಡುಗೆ ಮಹಾತ್ಮ ಗಾಂಧಿಯವರಿಗಿಂತ ಕಡಿಮೆಯಿಲ್ಲ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಅವರನ್ನು ಗೌರವಿಸಲು ಉತ್ತಮ ಮಾರ್ಗವೆಂದರೆ ಅವರ ಚಿತ್ರವನ್ನು ಕರೆನ್ಸಿ ನೋಟುಗಳಲ್ಲಿ ಮುದ್ರಿಸುವುದಾಗಿದೆ. ಗಾಂಧೀಜಿ ಅವರ ಫೋಟೋವನ್ನು ನೇತಾಜಿಯವರೊಂದಿಗೆ ಬದಲಾಯಿಸಬೇಕು ಎಬಿಹೆಚ್‌ಎಂ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ಹೇಳಿದ್ದಾರೆ.
ಗೋಸ್ವಾಮಿ ಅವರ ಬೇಡಿಕೆಗೆ ಟಿಎಂಸಿ ಮತ್ತು ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ವಿಭಜಕ ರಾಜಕೀಯವನ್ನು ಅನುಸರಿಸುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ಚೌಧರಿ ಮಾತನಾಡಿ, ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ ನಿರ್ವಿವಾದ. ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಯಾರಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಈಗ ಅವರ ಆದರ್ಶಗಳು ಮತ್ತು ತತ್ವಗಳು ದಿನನಿತ್ಯದ ಕೊಲೆಯಾಗುತ್ತಿವೆ, ಇದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.