ಹಾರಾಟದ ವೇಳೆ ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ತೆಗೆದ ಕಾರಣ ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನ್ಸ್ ಹೊಸ ರೂಲ್ಸ್ ಜಾರಿ ಮಾಡಿದೆ. ತುರ್ತು ನಿರ್ಗಮನ ಸಾಲಿನ ಕೆಲವು ಆಸನಗಳ ಟಿಕೆಟ್‌ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದೆ. ಇತ್ತೀಚಿನ ಘಟನೆಯಲ್ಲಿ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನದ ಬಾಗಿಲನ್ನು ತೆರೆದ ಘಟನೆ ಬಳಿಕ ಈ ನಿರ್ಧಾರ ಮಾಡಲಾಗಿದೆ.
ವಿಮಾನದಲ್ಲಿರುವ ಎಮರ್ಜೆನ್ಸಿ ಎಕ್ಸಿಟ್ ಬಾಗಿಲುಗಳಿರುವ ಸಾಲುಗಳಲ್ಲಿ ಕೆಲ ಸೀಟ್ ಗಳ ಟಿಕೆಟ್ ಮಾರಾಟ ಮಾಡುತ್ತಿಲ್ಲವೆಂದು ಹೇಳಿಕೆಯಲ್ಲಿ ತಿಳಿಸಿದೆ. 174-ಆಸನಗಳ A321 ಗಳಲ್ಲಿ ಸೀಟುಗಳು ಸಂಖ್ಯೆ 26A ಮತ್ತು 195-ಆಸನಗಳ ಮಾದರಿಗಳಲ್ಲಿ 31A ಸೀಟ್ ಲಭ್ಯವಿರುವುದಿಲ್ಲ ಎಂದು ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಈ ಕ್ರಮವು ಸುರಕ್ಷತಾ ಮುನ್ನೆಚ್ಚರಿಕೆಯಾಗಿದೆ ಮತ್ತು ವಿಮಾನವು ತುಂಬಿದ್ದರೂ ಸಹ ಅನ್ವಯಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಏಷಿಯಾನಾ ಏರ್‌ಲೈನ್ಸ್ ವಿಮಾನವು ಶುಕ್ರವಾರ ಲ್ಯಾಂಡಿಂಗ್ ಗೆ ತಯಾರಿ ನಡೆಸುತ್ತಿರುವಾಗ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನವನ್ನು ತೆರೆದಿದ್ದರು. ಘಟನೆ ವೇಳೆ ವಿಮಾನವು ಸುರಕ್ಷಿತವಾಗಿ ಇಳಿದರೂ ಹಲವು ಪ್ರಯಾಣಿಕರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.