ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ದೆಹಲಿಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಖಾಲಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಸದಸ್ಯರಾಗಿ ಅನರ್ಹಗೊಂಡ ಕೂಡಲೇ, ಬಿಜೆಪಿ ಸಂಸದ ಸಿಆರ್ ಪಾಟೀಲ್ ನೇತೃತ್ವದ ಲೋಕಸಭೆಯ ವಸತಿ ಸಮಿತಿಯು 2005 ರಿಂದ ರಾಹುಲ್ ಗಾಂಧಿ ಇರುವ 12
ತುಘಲಕ್ ಲೇನ್ ಬಂಗಲೆಯನ್ನು ತೆರವು ಮಾಡುವಂತೆ ಪತ್ರವನ್ನು ಕಳುಹಿಸಿತ್ತು. ಏಪ್ರಿಲ್ 22 ರೊಳಗೆ ರಾಹುಲ್ ಗಾಂಧಿ ಮನೆ ತೊರೆಯಬೇಕಿದ್ದರೂ ಅವರು ಕೇಂದ್ರ ಸರ್ಕಾರವನ್ನು ಆರೋಪಿಸುತ್ತಾ ತನ್ನ ವಿರುದ್ಧದ ಕ್ರಮ ಸಂವಿಧಾನ ವಿರೋಧಿ ನಡೆ ಎಂದು ಆರೋಪಿಸುತ್ತಿದ್ದರು.
ಪ್ರೋಟೋಕಾಲ್ ಪ್ರಕಾರ ಅನರ್ಹಗೊಂಡ ಸಂಸದರು ಸರ್ಕಾರಿ ವಸತಿ ಒಂದು ತಿಂಗಳ ಅವಧಿಯೊಳಗೆ ಅವರು ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕು.
ಕಳೆದ ವಾರ 12 ತುಘಲಕ್ ಲೇನ್‌ನ ಬಂಗಲೆಯಲ್ಲಿದ್ದ ವಸ್ತುಗಳನ್ನು ರಾಹುಲ್ ಗಾಂಧಿ ಸಾಗಿಸಿದ್ದರು. ಉಳಿದ ವಸ್ತುಗಳನ್ನು ಇಂದು ಸಾಗಿಸಿ ದೆಹಲಿಯ 10 ಜನಪಥ್‌ನಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಬಂಗಲೆಗೆ ತೆರಳುವುದಾಗಿ ಅವರ ಕಚೇರಿ ತಿಳಿಸಿದೆ.
2019 ರಲ್ಲಿ ಮೋದಿ ಉಪನಾಮದ ಕುರಿತು ಮಾನನಷ್ಟ ಪ್ರಕರಣದಲ್ಲಿ ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಅವರು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದರು.
ಮೇಲ್ಮನವಿ ಸಲ್ಲಿಸಲು ಗುಜರಾತ್ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿತ್ತು. ಅದರಂತೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದರಿಂದಾಗಿ ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆಯಿಂದ ಬಚಾವಾಗುವ ಸಾಧ್ಯತೆ ಕಡಿಮೆಯಿದೆ.
ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಳ್ಳಲು ಸೂರತ್ ನ್ಯಾಯಾಲಯದ ಆದೇಶದ ವಿರುದ್ಧ ಈಗ ಗುಜರಾತ್ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.