ಹೈದರಾಬಾದ್: ತೆಲಂಗಾಣದ ಸಂಯೋಜಿತ ಅವಳಿಗಳಾದ ವೀಣಾ ಮತ್ತು ವಾಣಿ ಅವರು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದೀಗ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದಾರೆ.
ತೆಲಂಗಾಣ ಸ್ಟೇಟ್ ಬೋರ್ಡ್ ಆಫ್ ಇಂಟರ್ಮೀಡಿಯೇಟ್ ಎಜುಕೇಶನ್ ನಡೆಸಿದ ಇಂಟರ್ಮೀಡಿಯೇಟ್ ಪಬ್ಲಿಕ್ ಪರೀಕ್ಷೆಯಲ್ಲಿ ವೀಣಾ 712 ಅಂಕಗಳನ್ನು ಪಡೆದರೆ, ವಾಣಿ 707 ಅಂಕಗಳನ್ನು ಪಡೆದಿದ್ದಾರೆ. 18 ವರ್ಷ ವಯಸ್ಸಿನ ಇವರಿಬ್ಬರು ಚಾರ್ಟರ್ಡ್ ಅಕೌಂಟೆಂಟ್ ಆಗುವ ಹಂಬಲ ಹೊಂದಿದ್ದಾರೆ.
ಶಿಕ್ಷಣ ಸಚಿವೆ ಪಿ. ಸಬಿತಾ ಇಂದ್ರ ರೆಡ್ಡಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಅವರು ಅವಳಿಗಳನ್ನು ಭೇಟಿಯಾಗಿ ಅವರ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ರು. ವೀಣಾ ಮತ್ತು ವಾಣಿ ಅವರ ಉನ್ನತ ವ್ಯಾಸಂಗಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ಸಚಿವರು ಭರವಸೆ ನೀಡಿದರು.
ಸಂಯೋಜಿತ ಅವಳಿಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಸಹ ಉತ್ತಮ ಸಾಧನೆ ಮಾಡಿದ್ದರು. ವೀಣಾ 9.3 ಜಿಪಿಎ ಪಡೆದರೆ, ವಾಣಿ 9.2 ಜಿಪಿಎ ಪಡೆದಿದ್ದಾರೆ.
ಕಳೆದ ತಿಂಗಳು ನಡೆದ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅವಳಿ ಮಕ್ಕಳು ತಮಗೆ ಯಾವುದೇ ವಿಶೇಷ ಸವಲತ್ತು ಬೇಡ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಅವರು ತಮಗೆ ನೀಡಿದ ಹೆಚ್ಚುವರಿ ಸಮಯವನ್ನು ಬಳಸಿಕೊಳ್ಳಲು ನಿರಾಕರಿಸಿದರು. ಕೇವಲ ಐದು ತಿಂಗಳ ಕಾಲ ತರಗತಿಗಳನ್ನು ನಡೆಸಲಾಗಿದ್ದರೂ ಸಯಾಮಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವೀಣಾ ಮತ್ತು ವಾಣಿ ಅವರು ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಬಡ ದಂಪತಿಗೆ ಅಕ್ಟೋಬರ್ 15, 2003 ರಂದು ಜನಿಸಿದರು. ದಂಪತಿ ದೈನಂದಿನ ಕೂಲಿ ಕಾರ್ಮಿಕರಾಗಿದ್ದು, ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರನ್ನು ತೊರೆದಿದ್ದಾರೆ. ಅಂದಿನಿಂದ ರಾಜ್ಯ ಸರ್ಕಾರ ಇಬ್ಬರ ರಕ್ಷಣೆ ಮಾಡುತ್ತಿದೆ. ನಿರ್ಣಾಯಕ ರಕ್ತನಾಳಗಳನ್ನು ಹಂಚಿಕೊಂಡಿರುವುದರಿಂದ ವೈದ್ಯರಿಗೆ ಸಯಾಮಿಗಳನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ.
ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಳೆದ ಅವರನ್ನು ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿರುವ ಶಿಶು ವಿಹಾರಕ್ಕೆ ಸ್ಥಳಾಂತರಿಸಲಾಯಿತು.