ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿರುವ ಘಟನೆಯೊಂದು ನಿಜಕ್ಕೂ ಸಿನಿಮಾ ಸ್ಟೋರಿಯಂತಿದೆ. ಕ್ಷುಲ್ಲಕ ಕಾರಣಕ್ಕೆ ಮನೆಯವರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಅಪ್ರಾಪ್ತ ಹುಡುಗಿಯನ್ನೇ ಹೋಲುತ್ತಿದ್ದ ಶವವೊಂದು ಸಿಕ್ಕಿದ್ದು, ಪೋಷಕರು ಸಹ ಆಕೆಯೇ ತಮ್ಮ ಮಗಳೆಂದು ಗುರುತಿಸಿದ್ದರು. ಆದರೆ ಪೊಲೀಸರ ಹೆಚ್ಚಿನ ತನಿಖೆಯಿಂದ ಹುಡುಗಿ ಜೀವಂತವಾಗಿ ಸಿಕ್ಕಿದ್ದು, ಅಸಲಿ ಸತ್ಯ ಬಯಲಾಗಿದೆ.
ಪ್ರಕರಣದ ವಿವರ: ನವದೆಹಲಿಯ ರೋಹಿಣಿ ಪ್ರದೇಶದಿಂದ ಜುಲೈ 18ರಂದು ಅಪ್ರಾಪ್ತ ಹುಡುಗಿ ನಾಪತ್ತೆಯಾಗಿದ್ದು, ಆಕೆಯನ್ನು ಎಲ್ಲೆಡೆ ಹುಡುಕಾಡಿದ್ದ ಪೋಷಕರು, ಬಳಿಕ ಜುಲೈ 19 ರಂದು ದೆಹಲಿಯ ವಿಜಯ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನ ತಂದೆ – ತಾಯಿ ಜೊತೆ ಸಣ್ಣದೊಂದು ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ ಹುಡುಗಿ ಮನೆ ಬಿಟ್ಟು ಹೋಗಿದ್ದ ಸಂಗತಿ ತಿಳಿದು ಬಂದಿತ್ತು.
ದೆಹಲಿಯ ವಿಜಯ್ ವಿಹಾರ್ ಪೊಲೀಸರು ಬಾಲಕಿಯ ಪತ್ತೆಗಾಗಿ ನಿರಂತರ ಪ್ರಯತ್ನ ನಡೆಸಿದ್ದು, ಇದರ ಮಧ್ಯೆ ಜುಲೈ 27ರಂದು ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯ ರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಶವ ಪತ್ತೆಯಾಗಿತ್ತು. ನದಿಯಲ್ಲಿ ತೇಲುತ್ತಿದ್ದ ಈ ಶವದ ಬಹುತೇಕ ಭಾಗವನ್ನು ಜಲಚರಗಳು ತಿಂದು ಹಾಕಿದ್ದ ಕಾರಣ ಗುರುತಿಸಲು ಆಗದ ಪರಿಸ್ಥಿತಿಯಲ್ಲಿ ದೇಹವಿತ್ತು. ಮೃತ ಬಾಲಕಿಯ ವಿವರಗಳನ್ನು ಎಲ್ಲ ಠಾಣೆಗೂ ಕಳಿಸಿದ್ದ ರಾಜಪುರ ಪೊಲೀಸರು ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಜುಲೈ 30 ರಂದು ಮೃತ ಬಾಲಕಿಯ ಅಂತ್ಯ ಸಂಸ್ಕಾರ ನೆರವೇರಿದ್ದು, ಆಗಸ್ಟ್ 9ರಂದು ವಿಜಯ್ ವಿಹಾರ್ ಪೊಲೀಸರನ್ನು ಸಂಪರ್ಕಿಸಿದ ರಾಜಪುರ ಪೊಲೀಸರು ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಜುಲೈ 18ರಂದು ನಾಪತ್ತೆಯಾಗಿದ್ದ ಬಾಲಕಿಯ ಚಹರೆಯನ್ನೇ ನಾವು ಅಂತ್ಯ ಸಂಸ್ಕಾರ ನೆರವೇರಿಸಿರುವ ಶವ ಹೋಲುತ್ತಿದೆ ಎಂದು ಮಾಹಿತಿ ನೀಡಿದ್ದರು. ಬಳಿಕ ದೆಹಲಿಯ ರೋಹಿಣಿ ಪ್ರದೇಶದಲ್ಲಿ ವಾಸವಾಗಿದ್ದ ಬಾಲಕಿಯ ಪೋಷಕರನ್ನು ರಾಜಪುರ ಠಾಣೆಗೆ ಕರೆದುಕೊಂಡು ಹೋದಾಗ ಅವರುಗಳು ಪೊಲೀಸರು ತೆಗೆದಿಟ್ಟಿದ್ದ ಶವದ ಮೇಲಿನ ಬಟ್ಟೆ ಹಾಗೂ ಫೋಟೋ ನೋಡಿ ಮೃತ ದೇಹ ನಮ್ಮ ಪುತ್ರಿಯದ್ದೇ ಎಂದು ಹೇಳಿದ್ದರು.
ಇನ್ನಷ್ಟು ವಿವರ ಕಲೆ ಹಾಕಿದಾಗ ಬಾಲಕಿ ರಾಜಸ್ಥಾನದ ವಿಕ್ರಮ್ ಚೌಹಾಣ್ ಎಂಬಾತನ ಜೊತೆ ಸಂಪರ್ಕದಲ್ಲಿರುವುದು ತಿಳಿದು ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬಾಲಕಿ ಆಗಸ್ಟ್ 14ರಂದು ಸಂಜೆ ಆಟೋ ಚಾಲಕನೊಬ್ಬನ ಮೊಬೈಲ್ ಪಡೆದು ವಿಕ್ರಂ ಚೌಹಾಣ್ ಗೆ ಕಾಲ್ ಮಾಡಿರುವುದು ತಿಳಿದು ಬಂತು.
ಆ ಬಳಿಕ ಬಾಲಕಿ ಜೀವಂತವಾಗಿರುವುದು ವಿಜಯ್ ವಿಹಾರ ಠಾಣೆಯ ಪೊಲೀಸರಿಗೆ ಖಚಿತವಾಗಿದ್ದು, ಆಕೆ ವಿಕ್ರಂ ಚವಾಣ್ಗೆ ಮತ್ತೊಮ್ಮೆ ಕರೆ ಮಾಡಿದಾಗ ಅದರ ಆಧಾರದ ಮೇಲೆ ಬಾಲಕಿ ಹರಿಯಾಣದ ಪಂಚಕುಲದಲ್ಲಿರುವ ಗುರುದ್ವಾರದಲ್ಲಿ ಇರುವುದು ಗೊತ್ತಾಯಿತು. ಇದೀಗ ಬಾಲಕಿಯನ್ನು ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿರುವ ಪೊಲೀಸರು ರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕ ಶವ ನಾಪತ್ತೆಯಾಗಿದ್ದ ಬಾಲಕಿಯದ್ದಲ್ಲ ಎಂದು ಹೇಳಿದ್ದಾರೆ. ಇದೀಗ ಆ ಶವ ಮತ್ಯಾರದ್ದು ಎಂಬ ತನಿಖೆಯಲ್ಲಿ ರಾಜಪುರ ಪೊಲೀಸರ ತೊಡಗಿದ್ದಾರೆ.