ವಾಷಿಂಗ್ಟನ್: ಮಾರಕ ಕೊರೋನಾಗೆ ಮಾಡೆರ್ನಾ ಕಂಪನಿ ಯಶಸ್ವಿ ಲಸಿಕೆ ಕಂಡು ಹಿಡಿದಿದ್ದು, ಸರ್ಕಾರಗಳು ಅನುಮತಿ ನೀಡಿದರೆ ತಿಂಗಳಾಂತ್ಯಕ್ಕೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.
ಸರ್ಕಾರಗಳು ಅನುಮತಿ ನೀಡಿದರೆ ತಿಂಗಳ ಒಳಗೆ ಲಸಿಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ(FDA) ಮಾಡೆರ್ನಾ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈಗಾಗಲೇ ಮೂರು ಹಂತದ ಪ್ರಯೋಗಗಳಲ್ಲಿ ಯಶಸ್ವಿಯಾಗಿರುವ ಮಾಡೆರ್ನಾ ಲಸಿಕೆ ಸಾರ್ವಜನಿಕರಿಗೆ ನೀಡುವ ಕುರಿತು ಅನುಮತಿ ಕೇಳಲಾಗಿದೆ. ಹಲವು ಔಷಧೀಯ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮುಂದುವರಿಸಿದ್ದು, ರಷ್ಯಾದ ಸ್ಪುಟ್ನಿಕ್ ವಿ, ಆಸ್ಟ್ರಾಝೆನಿಕಾ, ಭಾರತ್ ಬಯೋಟೆಕ್, ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮೊದಲಾದ ಕಂಪನಿಗಳು ಲಸಿಕೆ ವಿಚಾರದಲ್ಲಿ ಮುಂಚೂಣಿಯಲ್ಲಿವೆ.
ಶೇಕಡ 95 ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿರುವ ಮಾಡೆರ್ನಾ ಕಂಪನಿಯ ಲಸಿಕೆಯನ್ನು ಸರ್ಕಾರ ಅನುಮತಿಸಿದರೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಎಲ್ಲ ವಾಯುಮಾನ, ಎಲ್ಲ ಜನಾಂಗದವರಲ್ಲಿ ಲಿಂಗಬೇಧವಿಲ್ಲದೆ ಲಸಿಕೆ ಯಶಸ್ವಿಯಾಗಿದೆ. ಮಾತ್ರೆ ಹಾಗೂ ಇಂಜೆಕ್ಷನ್ ರೂಪದಲ್ಲಿ ಲಸಿಕೆ ಔಷಧ ತೆಗೆದುಕೊಂಡವರು ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ ಮತ್ತು ಯೂರೋಪ್ ದೇಶಗಳಿಗೆ ಮನವಿ ಮಾಡಿರುವ ಕಂಪನಿ ಲಸಿಕೆ ಬಿಡುಗಡೆಗೆ ಅನುಮತಿ ಕೇಳಿದ್ದು, ಇದೇ ಡಿಸೆಂಬರ್ ನಲ್ಲಿ ಜನರಿಗೆ ಲಸಿಕೆ ನೀಡಲಾಗುವುದು ಎನ್ನಲಾಗಿದೆ.