ಮಂಗಳವಾರ ಆಚರಿಸಲಾದ ಅಗ್ನಿ ಚತುರ್ಥಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ’ಚಿನ್ನದ ಗಣೇಶನ ದೇವಸ್ಥಾನ’ದಲ್ಲಿರುವ ದೇವರ ಮೂರ್ತಿಗೆ ಚಿನ್ನದ ಮುಕುಟವನ್ನು ಒಂಬತ್ತು ವರ್ಷಗಳ ಬಳಿಕ ಮರಳಿ ಅಳವಡಿಸಲಾಗಿದೆ.
ಮಾರ್ಚ್ 2012ರಲ್ಲಿ ದೇವಸ್ಥಾನದ ಭದ್ರತಾ ಸಿಬ್ಬಂದಿಯನ್ನು ಕೊಂದು ಒಳನುಗ್ಗಿದ್ದ ಡಕಾಯಿತರು ದೇವರಿಗೆ ತೊಡಿಸಲಾಗಿದ್ದ ಚಿನ್ನದ ಮುಕುಟವನ್ನು ಕಳ್ಳತನ ಮಾಡಿದ್ದರು. ದೇವಸ್ಥಾನದ ಪ್ರಮುಖ ಆಕರ್ಷಣೆಯಾದ ಈ ಮುಕುಟ ಕಳುವಾದ ಬಳಿಕ ಈ ದೇಗುಲಕ್ಕೆ ಬರುವ ಭಕ್ತಗಣದ ಸಂಖ್ಯೆ ಕಡಿಮೆಯಾಗಿತ್ತು.
ಅಡಿಕೆ ಹಾಗೂ ತೆಂಗಿನ ತೋಟಗಳಿಂದಲೇ ತುಂಬಿರುವ, ಮಹರಾಷ್ಟ್ರ ಕರಾವಳಿಯ, ರಾಯ್‌ಘಡದ ದಿವೇಘಡದ ಸುಂದರ ಪರಿಸರದಲ್ಲಿರುವ ದೇಗುಲಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಭೇಟಿ ನೀಡುತ್ತಾರೆ.
ರಾಜಕಾರಣಿಗಳು ನಿಜವಾದ ಗೂಂಡಾಗಳು; ಭ್ರಷ್ಟರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕು: ಮುತಾಲಿಕ್ ವಾಗ್ದಾಳಿ
ನವೆಂಬರ್ 23ರಂದು, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಸಂಪುಟದ ಇತರ ಸಚಿವರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗಣೇಶನ ಚಿನ್ನದ ಮುಕುಟವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದಾರೆ.
ಸುವರ್ಣ ಚಿನ್ನದ ಗಣೇಶನ ದೇವಸ್ಥಾನ ಎಂದು ಕರೆಯಲ್ಪಡುವ ಈ ದೇವಸ್ಥಾನವು ಮುಂಬಯಿಯಿಂದ 175 ಕಿಮೀ ದಕ್ಷಿಣದಲ್ಲಿ ಇದೆ.
ನವೆಂಬರ್ 17, 1997ರ ಸಂಕಷ್ಟಿ ಚತುರ್ಥಿಯ ದಿನದಂದು ಮಹಿಳೆಯೊಬ್ಬರು ಇಲ್ಲಿನ ತೋಟವೊಂದರಲ್ಲಿ ಮಣ್ಣನ್ನು ಅಗೆಯುತ್ತಿದ್ದ ವೇಳೆ ಕೆಳಗೆ ಯಾವುದೋ ವಸ್ತು ಇರುವುದು ಗೊತ್ತಾಗಿದೆ. ಆಗ ಗ್ರಾಮಸ್ಥರ ನೆರವಿನಿಂದ ಇನ್ನೆರಡು ಅಡಿ ಗುಂಡಿಯನ್ನು ನಾಜೂಕಾಗಿ ತೋಡಿದಾಗ ಅಲ್ಲಿ ತಾಮ್ರದ ಹಳೆಯ ಫಲಕವೊಂದು ಇದ್ದು, ಅದರ ಮೇಲೆ ಸಂಸ್ಕೃತದಲ್ಲಿ ಬರೆದ ಲಿಪಿ ಕಂಡಿದೆ. ಇನ್ನಷ್ಟು ಅಗೆದು ನೋಡಿದಾಗ, ಗಣೇಶನ ಹಳೆಯ ಚಿನ್ನದ ಮೂರ್ತಿಯೊಂದು ಕಂಡಿದ್ದು, ಅದನ್ನು 1.5 ಕೆಜಿ ಚಿನ್ನದಿಂದ ಮಾಡಿ 300 ಗ್ರಾಂ ಚಿನ್ನದ ಆಭರಣಗಳಿಂದ ಸಿಂಗರಿಸಲಾಗಿತ್ತು.
8-10ನೇ ಶತಮಾನದಲ್ಲಿ ಈ ಭಾಗವನ್ನು ಆಳುತ್ತಿದ್ದ ಶೈಲಹರ ರಾಜಮನೆತನಗಳ ಉಲ್ಲೇಖವನ್ನು ಆ ಡಬ್ಬದಲ್ಲಿ ಕಂಡ ’ತಾರಂಪತ್ರ’ದಲ್ಲಿ ಕಾಣಲಾಗಿತ್ತು. ಆದರೆ ಈ ಕುರಿತು ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲ.
ಗಣೇಶ ಮೂರ್ತಿ ಸಿಕ್ಕಿರುವುದನ್ನು ಸಂಭ್ರಮಿಸಿದ ಗ್ರಾಮಸ್ಥರು, ಆ ಮೂರ್ತಿಗೊಂದು ದೇಗುಲ ನಿರ್ಮಿಸಿದ್ದಾರೆ. ಚಿನ್ನದ ಗಣೇಶನ ಮೂರ್ತಿ ಇರುವ ದೇಗುವ ಭಾರೀ ಜನಪ್ರಿಯಗೊಂಡು ದಿವೇಘಡವು ದೇಶದ ಪ್ರವಾಸೀ ನಕ್ಷೆಯಲ್ಲಿ ಕಾಣಿಸಲು ಆರಂಭಿಸಿತು.
ಆದರೆ ಮಾರ್ಚ್ 2012ರ ಒಂದು ರಾತ್ರಿಯಲ್ಲಿ ಡಕಾಯಿತರ ಗುಂಪೊಂದು ದೇವಸ್ಥಾನಕ್ಕೆ ನುಗ್ಗಿ, ಭದ್ರತಾ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ದಾಳಿ ಮಾಡಿ ಗಣೇಶನ ಮೂರ್ತಿಯನ್ನು ಕದ್ದೊಯ್ದಿದ್ದಾರೆ. ಈ ವಿಷಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರೀ ಗದ್ದಲ ಸೃಷ್ಟಿಸಿತ್ತು. ಸದನದಲ್ಲಿ ಕೋಲಾಹಲ ಸೃಷ್ಟಿಸಿದರೆಂಬ ಆರೋಪದಲ್ಲಿ ಬಿಜೆಪಿ ಹಾಗೂ ಶಿವಸೇನೆಗೆ ಸೇರಿದ 14 ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿತ್ತು.
ಎಲ್ಲೆಡೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಡಕಾಯಿತರ ಬೇಟೆಗೆ ಜಾಲ ಹೆಣೆಯತೊಡಗಿದರು. ಔರಂಗಾಬಾದ್ ಹಾಗೂ ಇತರೆಡೆಗಳಲ್ಲಿ ಅಡಗಿದ್ದ ಡಕಾಯಿತರನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾದರು.
ಆದರೆ ಆ ವೇಳೆಗಾಗಲೇ ಗಣೇಶನ ಮೂರ್ತಿಯನ್ನು ಡಕಾಯಿತರು ಕರಗಿಸಿಬಿಟ್ಟಿದ್ದರು. ಗಣೇಶನ ಮೂರ್ತಿಗೆ ಬಳಸಲ್ಪಟ್ಟ ಅಷ್ಟೂ ಚಿನ್ನವನ್ನು ಪೊಲೀಸರು ಎರಡು ತಿಂಗಳ ಅವಧಿಯಲ್ಲಿ ವಶಕ್ಕೆ ಪಡೆಯಲು ಸಫಲರಾದರು.
ಇದೀಗ ಬಹಳಷ್ಟು ಸಮಯದ ನಂತರ, ಆಡಳಿತಾತ್ಮಕ ಹಾಗೂ ಶಾಸನಾತ್ಮಕ ಅಡೆತಡೆಗಳನ್ನೆಲ್ಲಾ ಮೀರಿ ಕರಗಿಸಿದ್ದ ಚಿನ್ನದಿಂದಲೇ ಗಣೇಶನ ಮೂರ್ತಿಯನ್ನು ಮರುಸೃಷ್ಟಿಸಿ ಅದರ ಹಿಂದಿನ ಜಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ.