ನೋಯ್ಡಾ: ಬಲು ಅಪರೂಪದ ಘಟನೆಯೊಂದರಲ್ಲಿ ಮದುವೆಯಾಗಿ ಎಂಟು ವರ್ಷಗಳ ನಂತರ ಮಹಿಳೆಯೊಬ್ಬಳು ಇವಿಎಫ್ ಮೂಲಕ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಕಡಿಮೆ ತೂಕ ಹೊಂದಿರುವ ನವಜಾತ ಶಿಶುಗಳನ್ನು ವೈದ್ಯರ ನಿಗಾದಲ್ಲಿ ಇಟ್ಟು ಆರೈಕೆ ಮಾಡಲಾಗಿದೆ.
ಗಾಜಿಯಾಬಾದ್ ನ ಮಹಿಳೆ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೂರು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದ್ದು, ಕಡಿಮೆ ತೂಕದ ಕಾರಣ ಅಬ್ಸರ್ವೇಷನ್ ನಲ್ಲಿ ಇಡಲಾಗಿದೆ.
ಮದುವೆಯಾಗಿ ವರ್ಷಗಳೇ ಉರುಳಿದರೂ ದಂಪತಿಗೆ ಮಕ್ಕಳಾಗದ ಕಾರಣ ಐವಿಎಫ್ ಚಿಕಿತ್ಸೆ ಪಡೆದುಕೊಂಡಿದ್ದರು. ಎರಡು ವರ್ಷ ಚಿಕಿತ್ಸೆಯ ನಂತರ ಅವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಏಕಕಾಲದಲ್ಲಿ ನಾಲ್ಕು ಮಕ್ಕಳನ್ನು ಸ್ವಾಗತಿಸಲು ಮಹಿಳೆ ಮತ್ತು ಅವರ ಕುಟುಂಬ ಸಂತೋಷವಾಗಿದೆ ಎಂದು ಮಹಿಳೆಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಶಶಿ ಅರೋರಾ ಹೇಳಿದ್ದಾರೆ.
ಗಂಡು ಶಿಶುಗಳ ತೂಕ 1.680 ಕೆಜಿ, 1.600 ಕೆಜಿ, 1.330 ಕೆಜಿ ಮತ್ತು ಹೆಣ್ಣು ಶಿಶು ತೂಕ 1.580 ಕೆಜಿ ಇದೆ ಎಂದು ಹಿರಿಯ ನವಜಾತ ಶಿಶುವೈದ್ಯ ಡಾ.ಮೇಜರ್ ಸಚಿನ್ ದುಬೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಮಕ್ಕಳನ್ನು ಸಿಕ್ ನಟಾಲ್ ಕೇರ್ ಯುನಿಟ್(ಎಸ್‌ಎನ್‌ಸಿಯು) ಗೆ ದಾಖಲಿಸಲಾಗಿದೆ. ಶಿಶುಗಳು ಮತ್ತು ತಾಯಿಯನ್ನು ಮೂರರಿಂದ ಐದು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.