ಗುವಾಹಟಿ : ಇಲ್ಲಿಯ ಐಐಟಿ ಕೇಂದ್ರದಲ್ಲಿ ಕೊರೊನಾ ಸ್ಪೋಟವಾಗಿದ್ದು, ಬರೋಬ್ಬರಿ 60 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳು ಕೆಲವು ದಿನಗಳ ಹಿಂದೆಯಷ್ಟೇ ಕಾಲೇಜಿಗೆ ಆಗಮಿಸಿದ್ದರು. ಆದರೆ, ಕ್ಯಾಂಪಸ್ ಗೆ ಸಂಬಂಧಿಸದ ವ್ಯಕ್ತಿಯೊಬ್ಬರಿಂದಾಗಿ ಇಡೀ ಕಾಲೇಜಿಗೆ ಸೋಂಕು ಹರಡಿದೆ ಎನ್ನಲಾಗುತ್ತಿದೆ.
ವಿದ್ಯಾರ್ಥಿಗಳನ್ನು ಕಾಲೇಜಿನ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಲ್ಲಿ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದಾರೆ. ಅಲ್ಲದೇ, ಕೊಠಡಿಯಲ್ಲಿದ್ದ ಶಿಕ್ಷಕರು ಆನ್ ಲೈನ್ ಮೂಲಕ ಪಾಠ ಮಾಡುತ್ತಿದ್ದಾರೆ. ಸೋಂಕಿತ ವಿದ್ಯಾರ್ಥಿಗಳು ಕೂಡ ಆನ್ ಲೈನ್ ಮೂಲಕ ತರಗತಿಗೆ ಹಾಜರಾಗುತ್ತಿದ್ದಾರೆ. ಇಡೀ ಕ್ಯಾಂಪಸ್ ನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಹಲವು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ವರದಿ ಬರುವುದು ಬಾಕಿ ಇದ್ದು, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಗೆ ಕೂಡ ಮಾದರಿಗಳನ್ನು ಕಳುಹಿಸಲಾಗಿದ್ದು, ಬಹುತೇಕರಲ್ಲಿ ಲಕ್ಷಣ ರಹಿತವಾಗಿದ್ದರೆ, ಹಲವರಲ್ಲಿ ಸೌಮ್ಯ ಲಕ್ಷಣಗಳು ಕಂಡು ಬಂದಿವೆ ಎನ್ನಲಾಗುತ್ತಿದೆ. ಇನ್ನೂ ಹಲವು ವಿದ್ಯಾರ್ಥಿಗಳು ರಜೆಯ ಹಿನ್ನೆಲೆಯಲ್ಲಿ ಅವರ ಊರುಗಳಲ್ಲಿಯೇ ಇದ್ದರು. ಹೀಗಾಗಿ ಆ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬಾರದಂತೆ ಸೂಚಿಸಲಾಗಿದೆ.