ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮರಂಡಹಳ್ಳಿ ಸಮೀಪ 60 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುಮಾರು 15 ಗಂಟೆಗಳ ಕಾರ್ಯಾಚರಣೆ ನಂತರ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಗುರುವಾರ ಸಂಜೆ ಕ್ರೇನ್ ನೆರವಿನಿಂದ ಆನೆಯನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ ಎಂದು ಅರಣ್ಯಾಧಿಕಾರಿ ರಾಜಕುಮಾರ್ ಮಾಹಿತಿ ನೀಡಿದ್ದಾರೆ. ದೊಡ್ಡ ಆನೆಗಳ ಗುಂಪಿನ ಭಾಗವಾಗಿದ್ದ 25 ವರ್ಷ ವಯಸ್ಸಿನ ಹೆಣ್ಣು ಆನೆ ಕಾರಿಡಾರ್ ಮಾರ್ಗದಲ್ಲಿ ಹಾದು ಹೋಗುವಾಗ ಪಾಲಕೋಡ್ ಸಮೀಪದ ಅರಣ್ಯ ಪ್ರದೇಶಕ್ಕೆ ನುಗ್ಗಿದೆ. ಅಲ್ಲಿಂದ ಈ ಆನೆ ಬೇರೆಯಾಗಿ ಪಂಚಮಪಳ್ಳಿ ಸಮೀಪ ತೆರೆದ ಬಾವಿಗೆ ಬಿದ್ದಿದೆ.
ಮಾಹಿತಿ ತಿಳಿದ ಪಾಲಕೋಡ್ ಫಾರೆಸ್ಟ್ ರೇಂಜರ್ ಸೆಲ್ವಂ ಮತ್ತು ರಾಜಕುಮಾರ್ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
60 ಅಡಿ ಆಳದ ಬಾವಿಗೆ ಬಿದ್ದ ಕಾರಣ ಆನೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಶುವೈದ್ಯ ಪ್ರಕಾಶ್ ಚಿಕಿತ್ಸೆ ನೀಡಿದ್ದಾರೆ. ಬಳಲಿದ್ದ ಆನೆಗೆ ನೀರು, ಹಣ್ಣು ನೀಡಿ ಉಪಚರಿಸಲಾಗಿದೆ. ಬಾವಿಯಲ್ಲಿದ್ದ ನೀರು ಖಾಲಿ ಮಾಡಿ ಕ್ರೇನ್ ಮೂಲಕ ಆನೆಯನ್ನು ಮೇಲಕ್ಕೆತ್ತಲಾಗಿದೆ. ತೆಂಗಿನ ತೋಟದ ಮಧ್ಯೆ ಬಾವಿ ಇದ್ದ ಕಾರಣ ಆನೆಯನ್ನು ರಕ್ಷಿಸಲು ಕಂದಕ ತೆಗೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕ್ರೇನ್ ಬಳಿಸಿ ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.