ವಾಷಿಂಗ್ಟನ್: ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರತಿಕ್ರಿಯೆ ನೀಡಿದ್ದು, ನಾವು ಕೈಗೊಂಡ ನಿರ್ಧಾರಕ್ಕೆ ಈಗಲೂ ಬದ್ಧರಾಗಿದ್ದು, ಅಫ್ಘಾನಿಸ್ತಾನದಿಂದ ಬರುವವರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.
18,000 ಅಮೆರಿಕನ್ನರು, ಆರು ಸಾವಿರ ಸೈನಿಕರನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ. ಅಮೆರಿಕನ್ನರ ಮೇಲಿನ ಯಾವುದೇ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಾನು ಏನು ಹೇಳುತ್ತವೆಯೋ ಅದನ್ನೇ ಮಾಡುತ್ತೇವೆ. ಇದು ಭಯೋತ್ಪಾದನೆಯನ್ನು ಕೊನೆಗಾಣಿಸುವ ಸಮಯವಾಗಿದೆ. ಕಾಬೂಲ್ ಏರ್ಪೋರ್ಟ್ ಸುರಕ್ಷಿತವಾಗಿಟ್ಟಿದ್ದೇವೆ. ನಾವು ಆಫ್ಘಾನಿಸ್ತಾನದ ಜನರ ಜೊತೆಗೆ ಇದ್ದೇವೆ. ಅಮೆರಿಕಕ್ಕೆ ಬರಬೇಕು ಎನ್ನುವ ನಾಗರಿಕರಿಗೆ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಮುಂದಿನ ವಾರ ನಡೆಯುವ ಜಿ-7 ರಾಷ್ಟ್ರಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತಾಲಿಬಾನ್ ಉಗ್ರರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ. ಆಫ್ಘಾನಿಸ್ತಾನವನ್ನು ಉಗ್ರರ ನೆಲೆಯಾಗಲು ಬಿಡುವುದಿಲ್ಲ. ತಾಲಿಬಾನ್ ಸಂಘಟನೆ ಯಾವತ್ತಿದ್ದರೂ ಅಮೆರಿಕ ವಿರೋಧಿಯಾಗಿದೆ. ಆಫ್ಘಾನಿಸ್ತಾನದಲ್ಲಿ ಸ್ಥಳಾಂತರ ಕಾರ್ಯಾಚರಣೆ ಅಪಾಯಕಾರಿಯಾಗಿದೆ. ಅಂತಿಮ ಫಲಿತಾಂಶ ಏನಾಗುತ್ತದೆ ಎಂದು ನಾನು ಭರವಸೆ ನೀಡುವುದಿಲ್ಲ. ಮಿತ್ರರಾಷ್ಟ್ರಗಳು ನಮ್ಮ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವುದನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಸಂಭಾವ್ಯ ದಾಳಿಗಳನ್ನು ಗಮನಿಸುತ್ತಿದ್ದೇವೆ. ವಿಮಾನ ನಿಲ್ದಾಣ ಮತ್ತು ಸಮೀಪದ ಸ್ಥಳಗಳಲ್ಲಿನ ದಾಳಿಗಳನ್ನು ಗಮನಿಸುತ್ತಿದ್ದು ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಅಮೆರಿಕನ್ನರನ್ನು ಕರೆತರುತ್ತೇವೆ ಎಂದಿದ್ದಾರೆ.