ತಾಲಿಬಾನಿಗಳ ಆಕ್ರಮಣದ ನಂತ್ರ ಅಫ್ಘಾನಿಸ್ತಾನಿಗಳ ಸ್ಥಿತಿ ಚಿಂತಾಜನಕವಾಗಿದೆ. ಅಫ್ಘಾನಿಸ್ತಾನದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಅಲ್ಲಿನ ಮಹಿಳೆಯರು ಹಾಗೂ ಹುಡುಗಿಯರು ನರಕ ಅನುಭವಿಸುತ್ತಿದ್ದಾರೆ. ಅನೇಕರ ಮೇಲೆ ಅತ್ಯಾಚಾರ ನಡೆದ ವರದಿಯಾಗಿದೆ. ಮಹಿಳೆರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ. ತಾಲಿಬಾನಿಗಳು ತಮ್ಮದೇ ಕಾನೂನನ್ನು ಅಪ್ಘಾನಿಸ್ತಾನದ ಮಹಿಳೆಯರ ಮೇಲೆ ಹೇರಿದ್ದಾರೆ. ಈ ಎಲ್ಲದರ ಮಧ್ಯೆ ಅಲ್ಲಿನ ಹುಡುಗಿಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಅಲ್ಲಿನ ಬಾಲಕಿಯರು ಮತ್ತೆ ಶಾಲೆಗೆ ಹೋಗಲು ಅವಕಾಶ ಸಿಕ್ಕಿದೆ.
ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ಬಾಲಕಿಯರ ಶಾಲೆಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. 7 ರಿಂದ 12 ನೇ ತರಗತಿಯ ವಿದ್ಯಾರ್ಥಿನಿಯರು ಶಾಲೆಗೆ ವಾಪಸ್ ಆಗ್ತಿದ್ದಾರೆ. ಫಿರೋಜ್‌ಕೋಹ್‌ನಲ್ಲಿರುವ ಶಾಲೆಗಳಿಗೆ ಹೋಗಲು ಒಪ್ಪಿಗೆ ನೀಡಲಾಗಿದೆ. ಫಿರೋಜ್‌ಕೋಹ್ ಕೌನ್ಸಿಲ್, ಘೋರ್ ಪ್ರಾಂತ್ಯದ ಶಿಕ್ಷಣ ಅಧಿಕಾರಿಗಳಿಗೆ, ಬಾಲಕಿಯರ ಶಾಲೆಗಳನ್ನು ತೆರೆಯುವಂತೆ ಒತ್ತಾಯಿಸಿತ್ತು. ಅದರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಶಾಲೆ ತೆರೆಯಲು ಒಪ್ಪಿಗೆ ನೀಡಿದ್ದಾರೆ.
ತಾಲಿಬಾನ್ ಪ್ರತಿದಿನ ಒಂದೊಂದು ಆದೇಶವನ್ನು ಹೊರಡಿಸುತ್ತಿದೆ. ತಾಲಿಬಾನ್ ಆಗಸ್ಟ್ 15, 2021 ರಂದು ಅಫ್ಘಾನಿಸ್ತಾನವನ್ನು ತನ್ನ ಕೈಗೆ ತೆಗೆದುಕೊಂಡಿದೆ. ಇದ್ರ ನಂತ್ರ ಅಫ್ಘಾನಿಸ್ತಾನದಲ್ಲಿ ಹುಡುಗಿಯರು ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿತ್ತು. ಸದ್ಯ ಅಫ್ಘಾನಿಸ್ತಾನ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಲ್ಲಿ ಬಡತನ ಜಾಸ್ತಿಯಾಗಿದೆ. ಜನರು ಹೊಟ್ಟೆ ತುಂಬಿಸಿಕೊಳ್ಳಲು ತಮ್ಮ ಹೆಣ್ಣು ಮಕ್ಕಳ ಮಾರಾಟಕ್ಕೂ ಮುಂದಾಗಿದ್ದಾರೆ. ಹೆಣ್ಣು ಮಕ್ಕಳ ಮಾರಾಟದ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿವೆ.