ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಗೈಯುತ್ತಿರುವ ತಾಲಿಬಾನ್ ಉಗ್ರರಿಗೆ ಆಫ್ಘನ್ ಸೇನೆ ಬಿಗ್ ಶಾಕ್ ನೀಡಿದೆ. ಉತ್ತರ ಬಘ್ಲಾನ್ ಪ್ರಾಂತ್ಯದಲ್ಲಿನ ಮೂರು ಜಿಲ್ಲೆಗಳನ್ನು ಆಫ್ಘನ್ ಸೇನೆ ಮತ್ತೆ ವಶಕ್ಕೆ ಪಡೆದುಕೊಂಡಿದೆ.
ತಾಲಿಬಾನ್ ಉಗ್ರರು ಅನೇಕ ಜಿಲ್ಲೆಗಳನ್ನು ವಶಕ್ಕೆ ಪಡೆದು ರಾಜಧಾನಿ ಕಾಬುಲ್ ಗೆ ಮುತ್ತಿಗೆ ಹಾಕಿ ಆಡಳಿತವನ್ನು ಕೈ ವಶಮಾಡಿಕೊಂಡಿದ್ದು, ಅಟ್ಟಹಾಸ ಮೆರೆಯುತ್ತಿದ್ದಾರೆ. ಕ್ರೌರ್ಯ ಮೆರೆಯುತ್ತಿರುವ ತಾಲಿಬಾನಿಗಳು ಜನಾಂಗೀಯ ಅಲ್ಪಸಂಖ್ಯಾತರ ಕಗ್ಗೊಲೆ ನಡೆಸುತ್ತಿದ್ದಾರೆ. ವಿರೋಧಿಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದಾರೆ.
ತಾಲಿಬಾನ್ ಉಗ್ರರಿಗೆ ತಿರುಗೇಟು ನೀಡುವಂತೆ ದೇಶಾದ್ಯಂತ ಪ್ರತಿಭಟನೆ ಜೋರಾಗಿದೆ. ಸ್ವಾತಂತ್ರ್ಯ ದಿನಾಚರಣೆ ನೆಪದಲ್ಲಿ ಆರಂಭವಾದ ಪ್ರತಿಭಟನೆ ಬಿರುಸುಗೊಂಡಿದ್ದು, ಹೆಚ್ಚಿನ ಸಂಖ್ಯೆಯ ಯುವಕರು, ಯುವತಿಯರು ಕೂಡ ತಾಲಿಬಾನ್ ಉಗ್ರರ ವಿರುದ್ಧ ಪ್ರತಿಭಟಿಸತೊಡಗಿದ್ದಾರೆ.
ಇನ್ನು ತಾಲಿಬಾನಿಗಳ ನಿಯಂತ್ರಣದಲ್ಲಿದ್ದ ದೇಹ್ ಸಲಾಹ್, ಬೆನೋ ಮತ್ತು ಪೊಲ್ ಇ ಹೆಸಾರ್ ಜಿಲ್ಲೆಗಳನ್ನು ಆಫ್ಘನ್ ಪಡೆಗಳು ಮತ್ತೆ ವಶಕ್ಕೆ ಪಡೆದಿವೆ ಎಂದು ಆಫ್ಘಾನಿಸ್ತಾನದ ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮೊಹಮ್ಮದಿ ತಿಳಿಸಿದ್ದಾರೆ.
ತಾಲಿಬಾನ್ ಉಗ್ರರನ್ನು ಹತ್ತಿಕ್ಕಲು ನಮ್ಮ ಪ್ರಯತ್ನ ಮುಂದುವರೆದಿದೆ ಎಂದು ತಾಲಿಬಾನ್ ವಶಕ್ಕೆ ಒಳಪಡದ ಪಂಜ್ ಶೀರ್ ಪ್ರಾಂತ್ಯದಲ್ಲಿರುವ ಬಿಸ್ಮಿಲ್ಲಾ ಮೊಹಮ್ಮದಿ ಹೇಳಿದ್ದಾರೆ. ಆಫ್ಘನ್ ಸೇನಾಪಡೆಗಳೊಂದಿಗಿನ ಕಾದಾಟದಲ್ಲಿ 40 ತಾಲಿಬಾನಿಗಳನ್ನು ಕೊಲ್ಲಲಾಗಿದೆ ಎಂದು ಹೇಳಲಾಗಿದೆ.