ಮುಂಬೈ: ಸ್ವಂತ ಮನೆ ಹೊಂದುವ ಕನಸು ಕಂಡ ಮಧ್ಯಮ ವರ್ಗದ ಜನತೆಗೆ ಗೃಹ ಸಾಲ ಸಂಸ್ಥೆಯಾಗಿರುವ ಎಲ್ಐಸಿ ಹೌಸಿಂಗ್ ಫೈನಾನ್ಸ್ ಶುಭ ಸುದ್ದಿ ನೀಡಿದೆ.
ಕೈಗೆಟುಕುವ ದರದ ಮನೆಗಳ ನಿರ್ಮಾಣ, ಖರೀದಿಗೆ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತ ಅಗ್ಗದ ಮನೆಗಳ ಸಾಲ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಶೇಕಡ 8-10 ರಷ್ಟು ಇದ್ದು, ಮುಂದಿನ ಎರಡು ವರ್ಷದಲ್ಲಿ ಇದನ್ನು ಶೇಕಡ 20 ರಿಂದ 25 ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಸಾರ್ವಜನಿಕ ವಲಯದ ಗೃಹ ಸಾಲ ಸಂಸ್ಥೆಯಾಗಿರುವ ಎಲ್ಐಸಿ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ಟಿ. ಅಧಿಕಾರಿ ತಿಳಿಸಿದ್ದಾರೆ.
ಕಂಪನಿಯ ಸಾಲ ನೀಡಿಕೆಯಲ್ಲಿ ಶೇಕಡ 5ರಷ್ಟು ಇಳಿಕೆ ಕಂಡುಬಂದಿದೆ. ಇದುವರೆಗೆ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದವರು ಮತ್ತು ವೇತನದಾರರಿಗೆ ಮಾತ್ರ ಸಾಲ ನೀಡಲು ಆದ್ಯತೆ ನೀಡಲಾಗಿತ್ತು. ಇದು ಸಂಸ್ಥೆಯ ಸಾಲ ನೀಡಿಕೆ ಕುಸಿತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಗ್ಗದ ದರದ ಮನೆಗಳಿಗೆ ಸಾಲ ವಲಯ ಲಾಭದಾಯಕವಾಗಿರುವುದರಿಂದ ಸಂಸ್ಥೆಯು ಕಾರ್ಯತಂತ್ರ ಬದಲಿಸಿದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿಲ್ಲದವರು ಮತ್ತು ಸಂಬಳದಾರರಲ್ಲದವರಿಗೂ ಸಾಲ ವಿಸ್ತರಣೆಯಾಗುವ ಸಾಧ್ಯತೆ ಇದೆ.