ಬೆಂಗಳೂರು: ಆಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು 1 ಲಕ್ಷ ರೂ. ಸುಪಾರಿ ನೀಡಿ ಕೊಲೆ ಮಾಡಿಸಿ ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ಪತ್ನಿ ಮತ್ತು ಆಕೆಯ ಬಾವ ಸೇರಿದಂತೆ ಐವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೋಗನಹಳ್ಳಿ ನಿವಾಸಿ ನಾಗರತ್ನ, ಆಕೆಯ ಅಕ್ಕನ ಗಂಡ ರಾಮ, ಆಂಧ್ರದ ಧರ್ಮಾವರಂ ಮೂಲದ ಶಶಿಕುಮಾರ್, ಸುರೇಶ್, ಚಿನ್ನಯ್ಯ ಬಂಧಿತ ಆರೋಪಿಗಳು. ಬೋಗನಹಳ್ಳಿ ಸಮೀಪ ನಾಗರತ್ನ ಪತಿ ತಿಪ್ಪೇಶನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ನಂತರ ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ನಾಗರತ್ನ ಬೆಳ್ಳಂದೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ತನಿಖೆ ನಡೆಸಿ ಮೃತನ ಪತ್ನಿಯಿಂದಲೇ ಕೊಲೆಯಾದ ರಹಸ್ಯ ಬಯಲಿಗೆಳೆದಿದ್ದಾರೆ.
10 ವರ್ಷದ ಹಿಂದೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ತಿಪ್ಪೇಶ ಮತ್ತು ನಾಗರತ್ನ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ದಂಪತಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಜೀವನ ಸಾಗಿಸುತ್ತಿದ್ದರು.
ನಾಗರತ್ನ ಅಕ್ಕನ ಗಂಡ ರಾಮನ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದು, ಈ ವಿಚಾರ ತಿಳಿದು ತಿಪ್ಪೇಶ ಜಗಳವಾಡಿದ್ದ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ಗಂಡನನ್ನು ಕೊಲ್ಲಿಸಲು ರಾಮನ ಜೊತೆಗೆ ಸೇರಿ ಸಂಚು ರೂಪಿಸಿದ್ದಾರೆ. ಬಳಿಕ ಆಂಧ್ರಪ್ರದೇಶದ ಶಶಿಕುಮಾರ್, ಸುರೇಶ್, ಚಿನ್ನಯ್ಯ ಅವರನ್ನು ಸಂಪರ್ಕಿಸಿ 1 ಲಕ್ಷ ರೂ. ಸುಪಾರಿ ನೀಡಿದ್ದು, ಆರೋಪಿಗಳು ಕೊಲೆ ಮಾಡಿದ್ದರು.