ಬೆಳಗಾವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗನನ್ನು ಬಾವಿಗೆ ದೂಡಿ ಕೊಲೆ ಮಾಡಿದ ಮಹಿಳೆಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 7,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯ ಸುಧಾ(31) ಶಿಕ್ಷೆಗೆ ಒಳಗಾದ ಮಹಿಳೆ. 2019ರ ಆಗಸ್ಟ್ 22ರಂದು ಪ್ರಕರಣ ನಡೆದಿತ್ತು. ಚಿಕ್ಕೋಡಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್. ಚವ್ಹಾಣ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ವೈ.ಜಿ. ತುಂಗಳ್ ಅವರು ವಾದ ಮಂಡಿಸಿದ್ದರು.
ಬೆಲ್ಲದಬಾಗೇವಾಡಿಯ ಸುಧಾ ತನ್ನ 10 ವರ್ಷದ ಮಗ ಪ್ರವೀಣನನ್ನು ಬಾವಿಗೆ ನೂಕೆ ಕೊಲೆ ಮಾಡಿದ್ದಾಳೆ. ರಾಮಪ್ಪನೊಂದಿಗೆ ಸುಧಾ ಆಕ್ರಮ ಸಂಬಂಧ ಹೊಂದಿದ್ದಳು. ಸುಧಾ ಹಿರಿಯ ಮಗ ಪ್ರವೀಣ ಮತ್ತು ಕಿರಿಯ ಮಗ ಪ್ರಜ್ವಲನಿಗೆ ಹಣ ಕೊಟ್ಟು ಅಂಗಡಿಯಲ್ಲಿ ತಿನಿಸು ತರಲು ಹೇಳಿ ಕಳುಹಿಸಿದ್ದು, ಪ್ರಿಯಕರನೊಂದಿಗೆ ಸಂಬಂಧ ಬೆಳೆಸಿದ್ದಾಳೆ. ಇದನ್ನು ಕಂಡು ಹಿರಿಯ ಮಗ ಪ್ರವೀಣ ತಂದೆಗೆ ಹೇಳುವುದಾಗಿ ತಿಳಿಸಿದ್ದಾನೆ. ಆತನನ್ನು ಜಮೀನೊಂದರ ಬಾವಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಮತ್ತೊಬ್ಬ ಮಗನಿಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾಳೆ.
ಈ ಕುರಿತಾಗಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ಆಲಿಸಿದ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.