ಮಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದಾಗಿ ಅವಘಡಗಳು ಸಂಭವಿಸಿದ್ದು, ಅದ್ಯಪಾಡಿಯಲ್ಲಿ ಭೂಕುಸಿತವುಂಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅದ್ಯಪಾಡಿಯಲ್ಲಿ ಗುಡ್ಡಕುಸಿದಿದ್ದು, ಇದಕ್ಕೆ ಮಂಗಳೂರು ಏರ್ ಪೋರ್ಟ್ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂಕುಸಿತದ ಪರಿಣಾಮ ಬಜ್ಪೆ ಹಾಗೂ ಅದ್ಯಪಾಡಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಏರ್ ಪೋರ್ಟ್ ನ ಕೆಳಭಾಗದ ಪ್ರದೇಶದಲ್ಲಿ ಭೂಕುಸಿತವಾಗಿದ್ದು, ಉಮಾನಾಥ್ ಸಾಲಿಯಾನ್ ಎಂಬುವವರ ಮನೆಗೆ ಹಾನಿಯಾಗಿದೆ. ಮನೆಯ ಅಂಗಳದ ತುಂಬೆಲ್ಲ ಮಣ್ಣು, ಕೆಸರು ತುಂಬಿದ ನೀರು ತುಂಬಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಮಂಗಳೂರು ಏರ್ ಪೋರ್ಟ್ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ದೂರು ಸ್ವೀಕರಿಸಿದ್ದಾರೆ.
ಚಂಡಮಾರುತದ ಪರುಣಾಮ ಭಾರಿ ಮಳೆಯಿಂದಾಗಿ ಏರ್ ಪೋರ್ಟ್ ನ ರನ್ ವೇಯಲ್ಲಿ ನೀರು ತುಂಬಿಕೊಂಡಿತ್ತು. ಅವೈಜ್ಞಾನಿಕವಾಗಿ ಏರ್ ಪೋರ್ಟ್ ಪ್ರಾಧಿಕಾರ ನೀರನ್ನು ಹೊರಹಾಕಿದೆ. ಒಂದೇ ಕಡೆ ನೀರು ಬಿಟ್ಟ ಪರಿಣಾಮ ಭೂಕುಸಿತ ಉಂಟಾಗಿ ಅವಾಂತರ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.