ನವದೆಹಲಿ: ವಯಸ್ಕ ಮಹಿಳೆ ತನ್ನ ಆಯ್ಕೆಯ ಪ್ರಕಾರ ಮದುವೆಯಾಗಲು ಮತ್ತು ಮತಾಂತರಗೊಳ್ಳಲು ಮುಕ್ತವಾಗಿರುತ್ತಾರೆ ಎಂದು ಕೊಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದ್ದು, ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠದಲ್ಲಿ ಈ ಕುರಿತಾದ ವಿಚಾರಣೆ ನಡೆದಿದೆ. ನಾಪತ್ತೆಯಾಗಿರುವ 19 ವರ್ಷದ ಮಗಳನ್ನು ಪತ್ತೆ ಹಚ್ಚುವಂತೆ ಕೋರಿ ಪೋಷಕರು ಮನವಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ಕೋರ್ಟ್ ತೀರ್ಪು ನೀಡಿದೆ.
ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಯುವತಿ ಮದುವೆಯಾಗಿ ಮತಾಂತರಗೊಂಡಿದ್ದಾಳೆ ಎಂದು ಹೇಳಲಾಗಿದ್ದು, ಪೋಲಿಸರಿಂದ ಹೇಳಿಕೆ ಪಡೆದ ಕೋರ್ಟ್ ವಯಸ್ಕ ಮಹಿಳೆ ತನ್ನ ಆಯ್ಕೆಯ ಪ್ರಕಾರ ಮದುವೆಯಾಗಲು ಮತ್ತು ಮತಾಂತರಗೊಳ್ಳಲು ಮುಕ್ತವಾಗಿದ್ದು, ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಪೊಲೀಸ್ ಅಧಿಕಾರಿಗೆ ಯುವತಿ ನೀಡಿದ ಹೇಳಿಕೆಯ ಆಧಾರದಲ್ಲಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿಲ್ಲ. ಆಕೆ ತಂದೆ ಮನೆಗೆ ಬರಲು ಇಚ್ಚಿಸುವುದಿಲ್ಲ ಎಂದು ತಿಳಿದು ಬಂದಿದೆ. ನಾಡಿಯಾ ಜಿಲ್ಲೆಯ ದುರ್ಗಾಪುರ ಗ್ರಾಮದ ಕೃಷಿಕರಾಗಿರುವ ಪೋಷಕರು, ಸೆಪ್ಟೆಂಬರ್ 18 ರಂದು ತಮ್ಮ ಮಗಳು ಮನೆಯಿಂದ ಬ್ಯಾಂಕ್ ಗೆ ಹೋದವಳು ಮತಾಂತರಗೊಂಡಿದ್ದು, ಮುಸ್ಲಿಂ ಧರ್ಮಕ್ಕೆ ಸೇರಿದ್ದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಮಗಳಿಗೆ ಮತಾಂತರವಾಗಲು ಆಮಿಷ ನೀಡಲಾಗಿದೆ ಎಂದು ಆರೋಪಿಸಿದ್ದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ಹೇಳಿದ ಕೋರ್ಟ್ ತಂದೆಯ ಸಂದೇಹ ನಿವಾರಿಸಲು ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಲು ಯುವತಿಗೆ ಸೂಚಿಸಿದೆ ಎನ್ನಲಾಗಿದೆ.
ಲವ್ ಜಿಹಾದ್ ಹೆಸರಿನಲ್ಲಿ ಧಾರ್ಮಿಕ ಮತಾಂತರ ನಿಷೇಧಿಸಲು ಉತ್ತರಪ್ರದೇಶ ಕಾನೂನು ಬಾಹಿರ ಮತಾಂತರ ಅಧಿನಿಯಮ 2020 ಸುಗ್ರಿವಾಜ್ಞೆ ಜಾರಿಗೆ ತಂದಿದ್ದು, ಅಲಹಾಬಾದ್ ಹೈಕೋರ್ಟ್ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಷೇಧಿಸುವ ಉತ್ತರಪ್ರದೇಶದ ಸುಗ್ರೀವಾಜ್ಞೆ ತಡೆಯಲು ನಿರಾಕರಿಸಿದೆ.