ಚಂಡಿಗಢ: ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಗಂಡು ಮಕ್ಕಳು 21 ವರ್ಷ ಮತ್ತು ಹೆಣ್ಣುಮಕ್ಕಳು 18 ವರ್ಷದವರೆಗೆ ಮದುವೆಯಾಗುವಂತಿಲ್ಲ. ಈಗ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪು ಗಮನ ಸೆಳೆದಿದೆ. 21 ವರ್ಷದೊಳಗಿನ ಯುವಕರು ಮದುವೆಯಾಗುವಂತಿಲ್ಲ. ಆದರೆ, 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಸಂಬಂಧ ಹೊಂದಬಹುದು, ಒಟ್ಟಿಗೆ ಇರಬಹುದು ಎಂದು ಹೇಳಿದೆ.
ಪಂಜಾಬ್ ನ ಗುರುದಾಸಪುರ್ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಯುವಕ-ಯುವತಿ ತಮಗೆ ರಕ್ಷಣೆ ನೀಡಬೇಕೆಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮದುವೆಯಾಗದೆ ಯುವಕ-ಯುವತಿ ಜೀವನ ನಡೆಸಬಹುದು ಎಂದು 2018 ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದೆ ಸ್ಪಷ್ಟನೆ ನೀಡಿದೆ.
ದೇಶದ ಪ್ರತಿಯೊಬ್ಬ ನಾಗರಿಕರ ರಕ್ಷಣೆ ಮತ್ತು ಅವರಿಗೆ ಸ್ವಾತಂತ್ರ್ಯ ಖಾತರಿಪಡಿಸುವುದು ಜವಾಬ್ದಾರಿಯಾಗಿದ್ದು, ಎರಡನೆಯ ಅರ್ಜಿದಾರರಿಗೆ 18 ವರ್ಷ ದಾಟಿದೆ. ಕಾನೂನಿನ ಪ್ರಕಾರ ಮದುವೆಯಾಗಲು ಸಾಧ್ಯವಿಲ್ಲದಿದ್ದರೂ, ಯುವಕನ ಹಕ್ಕುಗಳನ್ನು ಮೊಟಕುಗೊಳಿಸಲು ಆಗುವುದಿಲ್ಲ. ಯುವತಿ ಕೂಡ ವಯಸ್ಕಳಾಗಿರುವುದರಿಂದ ಇಬ್ಬರೂ ಒಟ್ಟಿಗೆ ಜೀವನ ನಡೆಸಬಹುದು ಎಂದು ಕೋರ್ಟ್ ಹೇಳಿದೆ.
21 ವರ್ಷ ದಾಟದ ಯುವಕ ನಿಯಮದ ಪ್ರಕಾರ ಮದುವೆಯಾಗುವಂತಿಲ್ಲ. 18 ವರ್ಷ ದಾಟಿದ ಯುವತಿಯೊಂದಿಗೆ ಸಂಬಂಧ ಬೆಳೆಸಬಹುದು. ಒಟ್ಟಿಗೆ ಜೀವನ ನಡೆಸಬಹುದು ಎಂದು ಹೇಳಲಾಗಿದೆ.