ಸಾಮಾಜಿಕ ಜಾಲತಾಣದಿಂದ ಒಳ್ಳೆಯದಾದರೆ, ಹಲವಾರು ಬಾರಿ ಇದು ಚಟವಾಗಿ ಮಾರ್ಪಟ್ಟರೆ ಜೀವಕ್ಕೇ ಅಪಾಯ. ನಮ್ಮ ಫೋನ್, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಸ್ಕ್ರೀನ್ ಬಹಳ ಹೊತ್ತು ನೋಡುವುದರಿಂದ ಆತಂಕ, ತಲೆನೋವು, ಖಿನ್ನತೆ ಮತ್ತು ಸ್ನಾಯುವಿನ ಒತ್ತಡವು ನಮ್ಮ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ಇದಾಗಲೇ ಹಲವಾರು ಅಧ್ಯಯನಗಳು ಹೇಳಿವೆ.
ಇದರ ಬಗ್ಗೆ ಇದೀಗ ಇಂಗ್ಲೆಂಡ್‌ನ ವೋರ್ಸೆಸ್ಟರ್‌ನ ಫೆನೆಲ್ಲಾ ಫಾಕ್ಸ್ ತಮ್ಮ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ. ವಯಸ್ಕರ ವಿಷಯದ ವೆಬ್‌ಸೈಟ್ ಓನ್ಲಿ ಫ್ಯಾನ್ಸ್ ಬ್ಲಾಗ್ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ 29 ವರ್ಷದ ಫೆನೆಲ್ಲಾ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ 14 ಗಂಟೆಗಳ ಕಾಲ ಕಳೆಯುತ್ತಿದ್ದರು. ಇದರಿಂದ ತಮಗೆ ತಲೆಸುತ್ತುವಿಕೆ ಹೆಚ್ಚಾಗಿ ನಂತರ ನಡೆಯಲು ಸಾಧ್ಯವಾಗದೇ ಒದ್ದಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಕೋವಿಡ್ -19 ಸಮಯದಲ್ಲಿ ಸಾಮಾಜಿಕ ಜಾಲತಾಣದ ಚಟ ಹೆಚ್ಚಿತು. ಪ್ರತಿದಿನ ಸುಮಾರು 14 ಗಂಟೆಗಳ ಕಾಲ ಕೇವಲ ಅಭಿಮಾನಿಗಳ ಜತೆ ಫೋನ್ನಲ್ಲಿ ಕಳೆಯುತ್ತಿದ್ದೆ. ಇದು ಎಷ್ಟರಮಟ್ಟಿಗೆ ನನ್ನ ಜೀವಕ್ಕೆ ಮಾರಕವಾಯಿತು ಎಂದರೆ ನಾನು ಸತ್ತೇ ಹೋಗುತ್ತೇನೆ ಎನ್ನಿಸತೊಡಗಿತು ಎಂದು ಅವರು ಹೇಳಿಕೊಂಡಿದ್ದಾರೆ.
ಅಧಿಕ ಒತ್ತಡದಿಂದ ಹೃದಯದ ಸಮಸ್ಯೆ ಬಂದಿತು, ನಾನು ಸಾಯುತ್ತೇನೆ ಎನಿಸತೊಡಗಿತು. ಇದು ನನ್ನ ಇಡೀ ಜೀವನದಲ್ಲಿ ಭಯಾನಕ ಅನುಭವವಾಗಿದೆ. ಸಾಮಾಜಿಕ ಜಾಲತಾಣದಿಂದ ದೂರ ಉಳಿಯದಿದ್ದರೆ ಸಾವಿಗೆ ಹತ್ತಿರವಾಗುತ್ತೀರಿ ಎಂದು ವೈದ್ಯರು ಸಲಹೆ ಕೊಟ್ಟ ಬಳಿಕ ನನ್ನ ತಪ್ಪಿನ ಅರಿವಾಗಿ ನಂತರ ಇದರಿಂದ ದೂರವಾದೆ ಎಂದು ಬರೆದುಕೊಂಡಿದ್ದಾರೆ.