ಕೋವಿಡ್-19 ಸಾಂಕ್ರಮಿಕದ ಕಾಟದಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ ಕಾರಣ ಆರ್ಥಿಕ ಮುಗ್ಗಟ್ಟಿನಲ್ಲಿರುವ ಬನ್ನೇರುಘಟ್ಟ ಮೃಗಾಲಯ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಮುಂದಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಾಲ್ಕು ವಿವಿಧ ಘಟಕಗಳಿವೆ — ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ಹಾಗೂ ರಕ್ಷಣಾ ಕೇಂದ್ರಗಳೆಲ್ಲಾ ಸೇರಿಕೊಂಡು ಒಟ್ಟಾರೆ 731.88 ಹೆಕ್ಟೇರ್ ಪ್ರದೇಶದಲ್ಲಿ ಈ ಜಾಗ ವ್ಯಾಪಿಸಿದೆ.
ಈ ಉದ್ಯಾನದ ವರಮಾನದ ಮೇಲೆ ಹೊಡೆತ ಬಿದ್ದಿರುವ ಕಾರಣ ಪ್ರಾಣಿಗಳನ್ನು ದತ್ತು ಪಡೆದು, ಅವುಗಳ ಲಾಲನೆ ಪಾಲನೆ ಹಾಗೂ ಆರೈಕೆ ತಗುಲುವ ವೆಚ್ಚ ಭರಿಸಲು ನೆರವಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಗೋಕುಲ್.
ದತ್ತು ಪಡೆದ ಪ್ರಾಣಿಗಳಿಗೆ ಹೆಸರನ್ನೂ ಸಹ ಇಡಬಹುದಾಗಿದೆ.
ಏಷ್ಯನ್ ಆನೆಯೊಂದಕ್ಕೆ ದಿನವೊಂದರ ಆಹಾರಕ್ಕೆ 3000 ರೂ. ವೆಚ್ಚವಾಗಲಿದ್ದು, ಉದ್ಯಾನದಲ್ಲಿ ಒಟ್ಟಾರೆ 25 ಆನೆಗಳಿವೆ.
2020-21ರ ವಿತ್ತೀಯ ವರ್ಷದಲ್ಲಿ 213 ಮಂದಿ 260 ಪ್ರಾಣಿಗಳನ್ನು ದತ್ತು ಪಡೆದಿದ್ದು, ಈ ಮೂಲಕ 34,94,750 ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಜೈವಿಕಧಾಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಣಿಗಳನ್ನು ದತ್ತು ಪಡೆಯುವ ಕಾರ್ಯಕ್ರಮಕ್ಕೆ ಕೋವಿಡ್ ಲಾಕ್‌ಡೌನ್ ಘೋಷಣೆಯಾದ ದಿನಗಳಲ್ಲಿ ಚಾಲನೆ ಕೊಡಲಾಗಿದೆ.