ಬೆಂಗಳೂರು : ರಾಜ್ಯದ 80 ‘ಆಯುಷ್’ ಆಸ್ಪತ್ರೆಗಳಲ್ಲಿ ಇನ್ನೆರಡು ತಿಂಗಳಲ್ಲಿ ಒಳರೋಗಿಗಳ ದಾಖಲಾತಿ ಆರಂಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ಬಡ ರೋಗಿಗಳಿಗೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇದನ್ನು ಹೊರತುಪಡಿಸಿ ಕೆಲವು ನಿರ್ಧಿಷ್ಟ ರೋಗಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೂ ಆರ್ಥಿಕ ಹೊರೆ ಬಾಧಿಸದಂತೆ ತಡೆಯಲು ನಮ್ಮ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ರಾಜ್ಯದ 80 ಆಯುಷ್ ಆಸ್ಪತ್ರೆಗಳಲ್ಲಿ ಇನ್ನೆರಡು ತಿಂಗಳಲ್ಲಿ ಒಳರೋಗಿಗಳ ದಾಖಲಾತಿ ಆರಂಭವಾಗಲಿದೆ. ಈಗಾಗಲೇ 55 ಆಸ್ಪತ್ರೆಗಳಲ್ಲಿ ದಾಖಲಾತಿ ಆರಂಭವಾಗಿದ್ದು, ಸದ್ಯ 50,397 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಇನ್ನೂ, ಒಬ್ಬರೇ ಹಲವು ವರ್ಷ ಎಚ್ಒಡಿ ಹುದ್ದೆಯಲ್ಲಿ ಮುಂದುವರಿಯುವುದನ್ನು ತಪ್ಪಿಸಲು ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ನಿಯಮಗಳಿಗೆ ಮುಂದಿನ ದಿನಗಳಲ್ಲಿ ತಿದ್ದುಪಡಿ ತರಲು ಉದ್ದೇಶಿಸಿದ್ದೇವೆ ಎಂದರು.
ಸಿಎಂ ಮಹತ್ವದ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಿತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಹಾಗೂ ಉನ್ನತ ಮಟ್ಟದ ಸಮಿತಿಯ ಸದಸ್ಯರಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ , ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.